ಗಾಲಿಕುರ್ಚಿಯಲ್ಲಿ ಬಂದ ಭಾಗ್ಯಶ್ರೀ ಕುಲಾಲ್ ಗೆ ಆಳ್ವಾಸ್ ಪ್ರಗತಿಯಲ್ಲಿ ಉದ್ಯೋಗದ ಹೊಸ ದಾರಿ

ಗಾಲಿಕುರ್ಚಿಯಲ್ಲಿ ಬಂದ ಭಾಗ್ಯಶ್ರೀ ಕುಲಾಲ್ ಗೆ ಆಳ್ವಾಸ್ ಪ್ರಗತಿಯಲ್ಲಿ ಉದ್ಯೋಗದ ಹೊಸ ದಾರಿ


ಮೂಡುಬಿದಿರೆ: ಕಳೆದ ಒಂದು ವರ್ಷದಿಂದ ಉದ್ಯೋಗಕ್ಕಾಗಿ ಕಾಯುತ್ತಿದ್ದ ಭಾಗ್ಯಶ್ರೀ ಕುಲಾಲ್ ಅವರ ನಿರೀಕ್ಷೆಗೆ ಆಳ್ವಾಸ್ ಪ್ರಗತಿ–2026 ಹೊಸ ತಿರುವು ನೀಡಿದೆ. 

ದೈಹಿಕ ವಿಶೇಷಚೇತನರಾಗಿರುವ ಅವರು, ತಮ್ಮ ಸಹೋದರನ ನೆರವಿನಿಂದ ಗಾಲಿಕುರ್ಚಿಯಲ್ಲಿ ಆಗಮಿಸಿ, ಉದ್ಯೋಗ ಮೇಳದಲ್ಲಿ ಭಾಗವಹಿಸಿ ಮೈಸೂರಿನ ರೆಡ್ಡೀಸ್ ಫೌಂಡೇಷನ್‌ನಲ್ಲಿ ಅಕೌಂಟೆಂಟ್ ಹುದ್ದೆಗೆ ಆಯ್ಕೆಯಾಗಿದ್ದಾರೆ.

ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಭಾಗ್ಯಶ್ರೀ, ಒಂದು ವರ್ಷದ ಹಿಂದೆ ಎಂ.ಕಾಂ ಪದವಿ ಪಡೆದಿದ್ದರು. ಪದವಿ ಪಡೆದ ಬಳಿಕ ಉದ್ಯೋಗಕ್ಕಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ, ಕಳೆದ ಒಂದು ವರ್ಷದಿಂದ ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದರು. ಉದ್ಯೋಗದ ನಿರೀಕ್ಷೆಯೊಂದಿಗೆ ಆಳ್ವಾಸ್ ಪ್ರಗತಿಗೆ ಆಗಮಿಸಿದ ಭಾಗ್ಯಶ್ರೀ ಅವರಿಗೆ, ದೈಹಿಕ ಸವಾಲು ಯಾವುದೂ ತಮ್ಮ ಕನಸಿಗೆ ಅಡ್ಡಿಯಾಗಲಿಲ್ಲ. ತಮ್ಮ ಸಹೋದರನ ನೆರವಿನಿಂದ ಗಾಲಿಕುರ್ಚಿಯಲ್ಲಿ ಮೇಳಕ್ಕೆ ಆಗಮಿಸಿ, ಸಂದರ್ಶನ ಎದುರಿಸಿ, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. 

ಅಂತಿಮವಾಗಿ ಮೈಸೂರಿನ ರೆಡ್ಡೀಸ್ ಫೌಂಡೇಷನ್‌ನಲ್ಲಿ ಅಕೌಂಟೆಂಟ್ ಹುದ್ದೆಗೆ ಆಯ್ಕೆಯಾಗುವ ಮೂಲಕ ತಮ್ಮ ಬಹುದಿನಗಳ ಉದ್ಯೋಗದ ಕನಸನ್ನು ನನಸಾಗಿಸಿಕೊಂಡಿದ್ದಾರೆ. 

ಉದ್ಯೋಗ ಸಿಕ್ಕಿರುವುದು ತುಂಬಾ ಸಂತೋಷ ತಂದಿದೆ. ಕಳೆದ ಒಂದು ವರ್ಷದಿಂದ ಉದ್ಯೋಗಕ್ಕಾಗಿ ಕಾಯುತ್ತಿದ್ದೆ. ಆಳ್ವಾಸ್ ಪ್ರಗತಿಗೆ ಬಂದು ಸಂದರ್ಶನ ಎದುರಿಸಿದ ಬಳಿಕ ನನಗೆ ಈ ಅವಕಾಶ ದೊರೆತಿದೆ. ಮೈಸೂರಿಗೆ ತೆರಳಿ ಕೆಲಸ ಮಾಡಲು ಸಿದ್ಧಳಾಗಿದ್ದೇನೆ ಎಂದು ಭಾಗ್ಯಶ್ರೀ ಸಂತಸ ವ್ಯಕ್ತಪಡಿಸಿದರು.

ಆಳ್ವಾಸ್ ಪ್ರಗತಿ 2026ರ ಮೊದಲ ದಿನದ ವಿವರ:

ಆನ್‌ಲೈನ್ ನೋಂದಣಿ ಮಾಡಿಸಿದ ಉದ್ಯೋಗಾಕಾಂಕ್ಷಿಗಳು: 13247

ಸ್ಪಾಟ್ ನೋಂದಣಿ ಮಾಡಿಸಿದ ಅಭ್ಯರ್ಥಿಗಳು: 83

ಉದ್ಯೋಗ ಮೇಳಕ್ಕೆ ಆಗಮಿಸಿದ ಕಂಪನಿಗಳು: 326

ಮೊದಲ ದಿನ ಆಗಮಿಸಿದ ಉದ್ಯೋಗಾಕಾಂಕ್ಷಿಗಳು: 13016

ಮೊದಲ ದಿನದ ಉದ್ಯೋಗ ಮೇಳದಲ್ಲಿ ಭಾಗವಹಿಸಿದ 326 ಕಂಪೆನಿಗಳ ಪೈಕಿ 207 ಕಂಪೆನಿಗಳು 718 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗದ ಆಫರ್‌ಗಳನ್ನು ನೀಡಿದ್ದು, 3093 ಅಭ್ಯರ್ಥಿಗಳನ್ನು ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗೆ ಶಾರ್ಟ್ ಲಿಸ್ಟ್ ಮಾಡಿವೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article