ಆ.21: ಮಹಿಳೆಯ ಮೇಲಿನ ಹಲ್ಲೆ ವಿರೋಧಿಸಿ ‘ಪುತ್ತೂರು ಚಲೋ’, ಹಿಂಜಾವೇ, ವಿಎಚ್‌ಪಿ ಬಜರಂಗದಳ ನೇತೃತ್ವದಲ್ಲಿ ಹೋರಾಟ
ಮಂಗಳವಾರ ಹಲ್ಲೆಗೊಳಗಾದ ಮಹಿಳೆ ಅಂಜನಾ ಪೈ ಅವರನ್ನು ಭೇಟಿಯಾದ ಬಳಿಕ ಅವರು ಮಾದ್ಯಮಗಳೊಂದಿಗೆ ಮಾತನಾಡಿದರು.
ಹಿಂದೂ ಜಾಗರಣಾ ವೇದಿಕೆ, ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ನೇತೃತ್ವದಲ್ಲಿ ಹಿಂದೂ ಪರಿವಾರ ಸಂಘಟನೆ ಸೇರಿಕೊಂಡು ಹೋರಾಟ ನಡೆಸಲಿದ್ದೇವೆ. ಅಂಜನಾ ಪೈ ಅವರ ಮೇಲೆ ಹಲ್ಲೆ ನಡೆಸಿದ ಮತಾಂಧ ಶಕ್ತಿಗಳನ್ನು ಬಂಧಿಸಿ ಕಾನೂನುಪ್ರಕಾರ ಶಿಕ್ಷೆ ನೀಡಬೇಕು. ಅಂಜನಾ ಪೈ ಅವರ ದೂರಿನ ಬಗ್ಗೆ ಸಮರ್ಪಕ ತನಿಖೆ ನಡೆಸಬೇಕು. ಹಲ್ಲೆಗೀಡಾದ ಮಹಿಳೆ ಮೇಲೆ 307 ಕೇಸು ದಾಖಲಾಗಿದೆ. ಇದು ಸರ್ಕಾರದ ತುಷ್ಟೀಕರಣ ನೀತಿಗೆ ಸ್ಪಷ್ಟ ಉದಾಹರಣೆಯಾಗಿದೆ. ಪೊಲೀಸರು ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕು. ಈ ಘಟನೆಯ ಹಿಂದೆ ನಿಷೇಧಿತ ಪಿಎಫ್ ಐ ಸಂಘಟನೆಯ ಕೈವಾಡ ಇರುವ ಬಗ್ಗೆ ಬಲವಾದ ಸಂಶಯ ಇದೆ. ಎಸ್‌ಡಿಪಿಐ ಸಂಘಟನೆ ತಾಕತ್ತಿದ್ದರೆ ಬಂದ್ ಮಾಡಿ ಎಂದು ಸವಾಲು ಹಾಕಿದ್ದಾರೆ. ಆದರೆ ಪೊಲೀಸ್ ಇಲಾಖೆ ಅವರ ಮೇಲೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ ಅವರು ಸಂಘಟನೆಯ ಪ್ರಮುಖರು ಸೇರಿ ಕಾನೂನಾತ್ಮಕವಾಗಿಯೇ ಹೋರಾಟ ಕೈಗೆತ್ತಿಕೊಳ್ಳುತ್ತೇವೆ ಎಂದರು.
ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ ಪುನೀತ್ ಅತ್ತಾವರ ಅವರು ಮಾತನಾಡಿ, ಪುತ್ತೂರು ಚಲೋ ಪ್ರತಿಭಟನೆಯಲ್ಲಿ ಪುತ್ತೂರು ಜಿಲ್ಲೆಯ ಹಿಂದೂ ಬಾಂಧವರು, ವರ್ತಕರು ಭಾಗವಹಿಸಲಿದ್ದಾರೆ. ದೊಡ್ಡ ಮಟ್ಟದ ಪ್ರತಿಭಟನ ಸಭೆ, ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಎಲ್ಲಾ ಸಂಘಟನೆಯವರು ಅದರಲ್ಲಿ ಭಾಗವಹಿಸಲಿದ್ದಾರೆ. ಪುತ್ತೂರಿನ ಎಲ್ಲಾ ಬಾಂಧವರಿಗೆ ತಮ್ಮ ಅಂಗಡಿ ಮುಂಗಟ್ಟುಗಳನ್ನು, ಕಚೇರಿಗಳನ್ನು ಬಂದ್ ಮಾಡಿ ಭಾಗವಹಿಸಲು ವಿನಂತಿ ಮಾಡುತ್ತೇವೆ ಎಂದರು.
ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ವಿಹಿಂಪ ವಿಭಾಗ ಕಾರ್ಯದರ್ಶಿ ಶಿವಾನಂದ ಮೆಂಡನ್, ಹಿಂಜಾವೇ ಮಂಗಳೂರು ಗ್ರಾಮಾಂತರ ಸಂಯೋಜಕ ನರಸಿಂಹ ಮಾಣಿ, ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಪ್ರಮುಖರಾದ ದಾಮೋದರ ಪಾಟಾಳಿ, ಪ್ರಶಾಂತ್ ಬಂಟ್ವಾಳ, ದಿನೇಶ್ ಚಾರ್ಮಾಡಿ, ಶ್ರೀಧರ್ ತೆಂಕಿಲ ಮೊದಲಾದವರಿದ್ದರು.