ಸೆ.4 ರಂದು 28ನೇ ಶ್ರೀಕೃಷ್ಣ ಲೋಕ ಕಾರ್ಯಕ್ರಮ
ಪುತ್ತೂರು: ವಿವೇಕಾನಂದ ಶಿಶುಮಂದಿರದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ 28ನೇ ವರ್ಷದ ಶ್ರೀಕೃಷ್ಣ ಲೋಕ ಕಾರ್ಯಕ್ರಮ ಸೆ.೪ರಂದು ನಡೆಯಲಿದೆ. ವಿವೇಕಾನಂದ ಶಿಶು ಮಂದಿರದ ಅಧ್ಯಕ್ಷ ರಾಜಗೋಪಾಲ ಭಟ್ ಅವರು ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಳಗ್ಗೆ 9 ಗಂಟೆಗೆ ಶಿಶು ಮಂದಿರದಲ್ಲಿ ಬಾಲಕೃಷ್ಣನ ತೊಟ್ಟಿಲ ಸಂಭ್ರಮ ನಡೆಯಲಿದೆ. ಇದಾದ ಬಳಿಕ ಶೋಭಾಯಾತ್ರೆಗೆ ಚಾಲನೆ ನೀಡಲಾಗುತ್ತದೆ.
ಶಿಶುಮಂದಿರದ ಮತ್ತು ತಾಲೂಕಿನ ಶಾಲೆಗಳ ಪುಟಾಣಿಗಳು ಶ್ರೀಕೃಷ್ಣ ವೇಷ ಧರಿಸಿಕೊಂಡು ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ತಾಲೂಕಿನಲ್ಲೇ ನಡೆಯುವ ಅತಿ ದೊಡ್ಡ ಶ್ರೀಕೃಷ್ಣ ಶೋಭಾಯಾತ್ರೆ ಇದಾಗಿದ್ದು, ಸಾವಿರಾರು ಮಕ್ಕಳು ಶ್ರೀಕೃಷ್ಣ ವೇಷಧಾರಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸಭಾ ಕಾರ್ಯಕ್ರಮ:
ಶೋಭಾ ಯಾತ್ರೆಯು ಶಿವಪೇಟೆಯ ಶಿಶು ಮಂದಿರದಿಂದ ಆರಂಭಗೊಂಡು ಭವಾನಿ ಶಂಕರ ದೇವಳ ರಸ್ತೆಯ ಮೂಲಕ, ಸಂತೆಕಟ್ಟೆ ರಸ್ತೆಯಲ್ಲಿ ಹಾದು, ಕೋರ್ಟ್ ರಸ್ತೆ, ಮುಖ್ಯ ರಸ್ತೆ ಮೂಲಕ ಮಹಾಲಿಂಗೇಶ್ವರ ದೇವಳದ ಸಭಾಮಂಟಪ ಸೇರಲಿದೆ. ಅಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪೂರ್ಣಾತ್ಮರಾಮ ಈಶ್ವರಮಂಗಲ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ದೇವಸ್ಥಾನದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಉದ್ಘಾಟಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಅಧ್ಯಕ್ಷತೆ ವಹಿಸಲಿದ್ದಾರೆ. ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ ಆಡಳಿತ ನಿರ್ದೇಶಕ ಚೇತನ್ ಪ್ರಕಾಶ್ ಕಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಭಾಗವಹಿಸಿದ ಎಲ್ಲ ಪುಟಾಣಿಗಳಿಗೂ ಸ್ಮರಣಿಕೆ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು, ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ರೈ ಸಣಂಗಳ, ಜತೆ ಕಾರ್ಯದರ್ಶಿ ಅಜಿತ್ ರೈ ಹೊಸಮನೆ ಉಪಸ್ಥಿತರಿದ್ದರು.