ರೈತಕ್ರೀಡೆ ಕಂಬಳಕ್ಕೆ ಬೆಂಬಲ ನೀಡಿ: ರೂಪೇಶ್ ರೈ
ಪುತ್ತೂರು: ರಾಜ್ಯ ಸರ್ಕಾರ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಈ ಬಾರಿ ತುಳುನಾಡಿನ ರೈತಾಪಿ ವರ್ಗದ ಕ್ರೀಡೆ ಕಂಬಳವನ್ನು ಆಯೋಜಿಸಲು ತೀರ್ಮಾನಿಸಿರುವುದು ಕರಾವಳಿ ಕರ್ನಾಟಕದ ಜನತೆಯ ಹೆಮ್ಮೆಯಾಗಿದ್ದು, ರಾಜ್ಯ ಯಾವುದೇ ಸಂಘಟನೆಗಳು ಈ ನಿರ್ಧಾರವನ್ನು ವಿರೋಧಿಸದೆ ರೈತರ ಕ್ರೀಡೆಗೆ ಬೆಂಬಲ ನೀಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ದ.ಕ.ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್ ತಿಳಿಸಿದರು.
ಅವರು ಶನಿವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಹಿಂದಿನ ಹಾಗೂ ಇಂದಿನ ಸಿಎಂ, ಪುತ್ತೂರು ಶಾಸಕರು ಸಹಿತ ಎಲ್ಲರ ಸಹಕಾರದಿಂದ ದಸರಾ ಕಂಬಳ ನಡೆಸಲು ತೀರ್ಮಾನಿಸಲಾಗಿದೆ. ಕಂಬಳಕ್ಕೆ ಮೈಸೂರು ಭಾಗದ ಕೆಲ ಸಂಘಟನೆಗಳು ಮಾಹಿತಿ ಕೊರತೆಯ ಕಾರಣಕ್ಕೆ ವಿರೋಧಿಸಿದ್ದು, ಜತೆಗೆ ಈ ಬಾರಿ ಬರಗಾಲದ ಹಿನ್ನೆಲೆಯಲ್ಲಿ ದಸರಾವನ್ನೇ ಅದ್ದೂರಿಯಾಗಿ ನಡೆಸದಂತೆರಾ ಭಾಗದ ಕೆಲವು ರೈತ ಸಂಘಟನೆಗಳು ಮನವಿ ಮಾಡಿದ್ದವು. ಆದರೆ ಬಳಿಕ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಯಾವುದೇ ವಿರೋಧವನ್ನು ವ್ಯಕ್ತಪಡಿಸಿಲ್ಲ.
ಮರಗಳನ್ನು ಕಡಿದರೆ ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ವಿರೋಧವನ್ನೂ ವ್ಯಕ್ತಪಡಿಸಿದ್ದು, ನಾವು ಮರಗಳನ್ನು ಉಳಿಸಿಕೊಂಡೇ ಜೋಡುಕರೆಯನ್ನು ಸಿದ್ಧಪಡಿಸುತ್ತಿದ್ದೇವೆ. ನಾಡಹಬ್ಬ ಕೇವಲ ಮೈಸೂರಿಗೆ ಸೀಮಿತವಾಗದೆ ಅದು ಇಡೀ ರಾಜ್ಯದ ನಾಡಹಬ್ಬವಾಗಿರುವುದರಿಂದ ಜಾನಪದ ಕ್ರೀಡೆಯಾದ ಕಂಬಳಕ್ಕೆ ಸರಕಾರ ಪ್ರೋತ್ಸಾಹ ನೀಡುವುದನ್ನು ಎಲ್ಲರೂ ಸ್ವಾಗತಿಸಲೇಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ವಿನೋದ ಭಟ್ ಪಾದೆಕಲ್ಲು, ಶಾಹುಲ್ ಹಮೀದ್, ಮಾರ್ಷೆಲ್ ವೇಗಸ್, ಮೋನಪ್ಪ ಗೌಡ, ಯೋಗೀಶ್ ಸಾಮಾನಿ ಉಪಸ್ಥಿತರಿದ್ದರು.