ಪುತ್ತೂರು ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ  ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೆರೊ ಅವರ 50ನೇ ಜನ್ಮದಿನ ಆಚರಣೆ

ಪುತ್ತೂರು ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೆರೊ ಅವರ 50ನೇ ಜನ್ಮದಿನ ಆಚರಣೆ

ದೂರದೃಷ್ಟಿಯ ನಾಯಕತ್ವದಿಂದ ಸಂತ ಫಿಲೋಮಿನಾ ಕಾಲೇಜು ಮತ್ತಷ್ಟು ಎತ್ತರಕ್ಕೇರಲಿ: ವಂ. ಫಾ. ಡಾ. ಜೆ.ಬಿ. ಸಾಲ್ದಾನ್ಹಾ


ಪುತ್ತೂರು: ಶಿಸ್ತು, ಸೇವಾ ಮನೋಭಾವ, ಸರಳತೆ ಹಾಗೂ ದೂರದೃಷ್ಟಿಯ ನಾಯಕತ್ವದೊಂದಿಗೆ ಐದು ದಶಕಗಳ ಜೀವನಯಾನವನ್ನು ಪೂರೈಸಿದ ಪುತ್ತೂರು ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲರಾದ ವಂ. ಫಾ. ಡಾ. ಆಂಟನಿ ಪ್ರಕಾಶ್ ಮೊಂತೆರೊ ಅವರ 50ನೇ ಜನ್ಮದಿನವನ್ನು ಕಾಲೇಜಿನ ಬೋಧಕ ,ಬೋಧಕೇತರ ವೃಂದದ ವತಿಯಿಂದ ಆತ್ಮೀಯವಾಗಿ ಆಚರಿಸಲಾಯಿತು.


ಕಾಲೇಜಿನ ಸಂಚಾಲಕರಾದ ವಂ. ಫಾ. ಡಾ. ಜೆ.ಬಿ. ಸಾಲ್ದಾನ್ಹಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಡಾ. ಮೊಂತೆರೊ ಅವರ ದೂರದೃಷ್ಟಿಯ ನಾಯಕತ್ವವನ್ನು ಶ್ಲಾಘಿಸಿ ಅಭಿನಂದಿಸಿದರು. ಅವರ ಸಮರ್ಥ ನಾಯಕತ್ವದಲ್ಲಿ ಕಾಲೇಜು ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆಗಳನ್ನು ದಾಖಲಿಸುವಂತಾಗಲಿ. ಡಾ. ಮೊಂತೆರೊ ಅವರಿಗೆ ಉತ್ತಮ ಅವಕಾಶಗಳು ದೊರೆತು, ಸೇಂಟ್ ಫಿಲೋಮಿನಾ ಕಾಲೇಜನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಂತಾಗಲಿ ಎಂದು ಹಾರೈಸಿದರು.


ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಪ್ರೊ. ಲಿಯೋ ನೊರೊನ್ಹಾ ಅವರು ಪುಷ್ಪಗುಚ್ಛ ನೀಡಿ ಡಾ. ಮೊಂತೆರೊ ಅವರನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಹಿಂದಿನ ಪ್ರಾಂಶುಪಾಲರನ್ನು ಸ್ಮರಿಸಿದ ಅವರು, ಡಾ. ಮೊಂತೆರೊ ಅವರೊಂದಿಗಿನ ತಮ್ಮ ಒಡನಾಟದ ದಿನಗಳನ್ನು ಮೆಲುಕು ಹಾಕಿ, ಸಂಸ್ಥೆಯೊಂದಿಗಿನ ತಮ್ಮ ಸುದೀರ್ಘ ಸಂಬಂಧದ ನೆನಪುಗಳನ್ನು ಹಂಚಿಕೊಂಡರು.


ಬೋಧಕ ವೃಂದದ ಸದಸ್ಯರು ಡಾ. ಮೊಂತೆರೊ ಅವರನ್ನು ಅಭಿನಂದಿಸಿ, ಅವರ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಯಶಸ್ವಿ ನಾಯಕತ್ವಕ್ಕಾಗಿ ಪ್ರಾರ್ಥಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಆಂಟನಿ ಪ್ರಕಾಶ್ ಮೊಂತೆರೊ ಅವರು, ತಮ್ಮ 50ನೇ ಜನ್ಮದಿನವನ್ನು ಆತ್ಮೀಯವಾಗಿ ಆಚರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಅವರು ಧನ್ಯವಾದ ಅರ್ಪಿಸಿದರು.

ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ವಿಜಯಕುಮಾರ್ ಮೊಳೆಯಾರ್ ಸ್ವಾಗತಿಸಿದರು. ವಿಜ್ಞಾನ ವಿಭಾಗದ ಡೀನ್ ಡಾ. ಮಾಲಿನಿ ಅಭಿನಂದನಾ ಭಾಷಣ ಮಾಡಿದರು. ವಾಣಿಜ್ಯ ವಿಭಾಗದ ಡೀನ್ ಪ್ರೇಮಲತಾ ವಂದಿಸಿದರು. ಪ್ರಶಾಂತ್ ರೈ ಪ್ರಾರ್ಥನೆ ನೆರವೇರಿಸಿದರು. ಸುಷ್ಮಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಡಾ. ವಿಜಯಕುಮಾರ್ ಮೊಳೆಯಾರ್ ಅವರ ನೇತೃತ್ವದಲ್ಲಿ ಸ್ಟಾಫ್ ಅಸೋಸಿಯೇಷನ್‌ ಸಂಯೋಜಕಿ ಡಾ. ಡಿಂಪಲ್ ಜೆ. ಫೆರ್ನಾಂಡಿಸ್ ಹಾಗೂ ಹರ್ಷಿತ್ ಅವರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಸಂಯೋಜಿಸಲಾಯಿತು

ಕಾರ್ಯಕ್ರಮದ ಬಳಿಕ ಡಾ. ಆಂಟನಿ ಪ್ರಕಾಶ್ ಮೊಂತೆರೊ ಅವರ ಆತಿಥ್ಯದಲ್ಲಿ ಭವ್ಯವಾದ ಸವಿಯೂಟವನ್ನು ಆಯೋಜಿಸಲಾಗಿದ್ದು, ಬೋಧಕ ವೃಂದದ ಸದಸ್ಯರು ಆತ್ಮೀಯವಾಗಿ ಭಾಗವಹಿಸಿ ಸಂಭ್ರಮಿಸಿದರು. ಪರಸ್ಪರ ಶುಭಾಶಯ ವಿನಿಮಯದೊಂದಿಗೆ ಕಾರ್ಯಕ್ರಮವು ಸ್ನೇಹ ಹಾಗೂ ಸೌಹಾರ್ದದ ವಾತಾವರಣದಲ್ಲಿ ಸಂಪನ್ನಗೊಂಡಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article