ಗೃಹಜ್ಯೋತಿ ಯೋಜನೆ ಸರ್ಕಾರದ ಪರಿಶೀಲನೆ 80ಶೇ. ಪೂರ್ಣ: ಉಮಾನಾಥ ಶೆಟ್ಟಿ ಪೆರ್ನೆ
ತಾಲೂಕಿನಾದ್ಯಂತ ಒಟ್ಟು 60,050 ಮಂದಿ ಗೃಹಜ್ಯೋತಿ ಉಚಿತ ಯೋಜನೆಯ ಫಲಾನುಭವಿಗಳಾಗಿದ್ದು, ತಾಲೂಕಿಗೆ ಕಳೆದ 3 ವರ್ಷಗಳಲ್ಲಿ ರೂ. 120,60,01,000 ಪಾವತಿಸಲಾಗಿದೆ. ಕಳೆದ ವರ್ಷ 10 ಸಾವಿರ ಫಲಾನುಭವಿಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮರು ಪರಿಶೀಲನೆ ಕಾರ್ಯ ನಡೆಯುತ್ತಿದ್ದು, ಆಗಸ್ಟ್ ಅಂತ್ಯದ ವರೆಗೆ ಪರಿಶೀಲನೆಗೆ ಅವಕಾಶ ಕಲ್ಪಿಸಲಾಗಿದೆ. ಮೆಸ್ಕಾ ಇಲಾಖೆಯ ಸಿಬ್ಬಂದಿಗಳು ಮೆಸ್ಕಾಂ ಕಚೇರಿ, ಗ್ರಾಮ ಪಂಚಾಯತ್ ಕಚೇರಿ ಹಾಗೂ ಮನೆ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಗ್ರಾಮಾಂತರ ಪ್ರದೇಶಗಳಲ್ಲಿ ಈಗಾಗಲೇ ಶೇ. 70ರಷ್ಟು ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ. ಆದಾಗ್ಯೂ ಗ್ರಾಮಾಂತರದಲ್ಲಿ ಇನ್ನೂ 20 ಸಾವಿರ ಫಲಾನುಭವಿಗಳು ಇನ್ನೂ ಪರಿಶೀಲನೆಗೆ ಒಳಪಡಲು ಬಾಕಿಯಾಗಿದ್ದಾರೆ. ನಗರ ಪ್ರದೇಶದಲ್ಲಿ 4613 ಫಲಾನುಭವಿಗಳು ಇನ್ನೂ ಪರಿಶೀಲನೆಗೆ ಒಳಪಟ್ಟಿಲ್ಲ. ಗ್ರಾಮಾಂತರ ಮತ್ತು ನಗರ ಸೇರಿದಂತೆ ಒಟ್ಟು 24613 ಮಂದಿ ಪರಿಶೀಲನೆಗೆ ಬಾಕಿ ಉಳಿದಿದ್ದಾರೆ. ಶೇ. 100 ಪರಿಶೀಲನೆಗೆ ಒಳಪಡಿಸುವ ನಿಟ್ಟಿನಲ್ಲಿ ಬಾಕಿ ಉಳಿದಿರುವ ಎಲ್ಲರೂ ಸಹಕರಿಸಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.
ಗ್ಯಾರಂಟಿ ಕಚೇರಿಯಲ್ಲಿ ವ್ಯವಸ್ಥೆ:
ನಗರದ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆ.3ರಿಂದ 5ರ ತನಕ ಮೂರು ದಿನಗಳ ಕಾಲ ಪುತ್ತೂರು ತಾಪಂ ಕಚೇರಿಯಲ್ಲಿರುವ ಗ್ಯಾರಂಟಿ ಕಚೇರಿಯಲ್ಲಿ ಪರಿಶೀಲನೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೂ ಪರಿಶೀಲನೆಗೆ ಒಳಪಡದ ನಗರದ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಆಗಮಿಸಿ ಪರಿಶೀಲನೆಗೆ ಒಳಪಡಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಈ ಬಗ್ಗೆ ಜನರಿಗೆ ಏನಾದರೂ ಸಮಸ್ಯೆಗಳಿದ್ದಲ್ಲಿ ತನಗೆ ಅಥವಾ ಗ್ಯಾರಂಟಿ ಸಮಿತಿ ಸದಸ್ಯರಲ್ಲಿ ತಿಳಿಸಿದಲ್ಲಿ ಅವರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮೆಸ್ಕಾಂ ಅಧಿಕಾರಿ ರಾಜೇಶ್ ಉಪಸ್ಥಿತರಿದ್ದರು.