ಸಂತ ಫಿಲೋಮಿನಾ ಕಾಲೇಜಿನ ಪಿನ್ಯಾಕಲ್ ಐಟಿ ಕ್ಬಬ್‌ನ ಚಟುವಟಿಕೆಗಳಿಗೆ ವಿಧ್ಯುಕ್ತ ಚಾಲನೆ
Wednesday, August 19, 2026
ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನ ಗಣಕವಿಜ್ಞಾನ ವಿಭಾಗದ ವಿದ್ಯಾರ್ಥಿ ಚಟುವಟಿಕೆಗಳಿಗೆ ವೇದಿಕೆಯಾಗಿರುವ ಪಿನ್ಯಾಕ್ ಐಟಿ ಕ್ಷಬ್‌ನ 2026-27ನೇ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳಿಗೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ವಹಿಸಿ, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಅವರು ಕಾಲೇಜಿನಲ್ಲಿ ದೊರೆಯುವ ಪ್ರತಿಯೊಂದು ಕಲಿಕಾ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ತಂತ್ರಜ್ಞಾನವು ಉದ್ಯೋಗಾವಕಾಶದ ಸಾಧಮಾತ್ರವಾಗಿರದೆ ಸಮಾಜದ ಒಳಿತಿಗಾಗಿ ಜವಾಬ್ದಾರಿಯುತವಾಗಿ ಬಳಸಬೇಕಾದ ಶಕ್ತಿಯಾಗಿದೆ. ಉತ್ತಮ ವೃತ್ತಿಪರರಾಗುವುದರ ಜೊತೆಗೆ ಉತ್ತಮ ನಾಗರಿಕರಾಗಿಯೂ ಬೆಳೆಯಬೇಕು. ಕೌಶಲ್ಯವು ನಿಮ್ಮನ್ನು ಉದ್ಯೋಗದತ್ತ ಕರೆದೊಯ್ದರೆ ಮೌಲ್ಯಗಳು ಮತ್ತು ಜವಾಬ್ದಾರಿಯುತ ನಡೆ ನಿಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಕರ್ನಾಟಕ ಸೈಬರ್ ಗಾರ್ಡಿಯನ್ನ ಉಪಾಧ್ಯಕ್ಷೆ ಪ್ರಣಿತಾ ಕೆ.ಎಸ್. ಮಾತನಾಡಿ, ಇಂದಿನ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಯುಗದಲ್ಲಿ ನಿರಂತರ ಕಲಿಕೆಯೇ ಯಶಸ್ಸಿನ ಗುಟ್ಟು. ಹೊಸ ಕೌಶಲ್ಯಗಳನ್ನು ಅಳವಡಿಸಿಕೊಳ್ಳಿ, ಸೈಬರ್ ಭದ್ರತೆಯ ಬಗ್ಗೆ ಜಾಗೃತರಾಗಿರಿ ಮತ್ತು ಆತ್ಮವಿಶ್ವಾಸದಿಂದ ಭವಿಷ್ಯದ ಅವಕಾಶಗಳನ್ನು ಸ್ವೀಕರಿಸಿರಿ. ಕಾಲೇಜಿನಲ್ಲಿ ದೊರೆಯುವ ಎಲ್ಲಾ ಕಲಿಕಾ ಸಂಪನ್ಮೂಲಗಳ ಸದ್ಬಳಕೆಮಾಡಬೇಕು. ಹೊಸ ತಂತ್ರಜ್ಞಾನಗಳನ್ನು ನಿರಂತರವಾಗಿ ಕಲಿತು, ಸಂಬಂಧಿತ ಪ್ರಮಾಣಪತ್ರಗಳನ್ನು ಪಡೆದು ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ಉತ್ತಮ ವ್ಯಕ್ತಿಚಿತ್ರವನ್ನು ತಯಾರಿಸಿದಲ್ಲಿ ಭವಿಷ್ಯದ ಉದ್ಯೋಗಾವಕಾಶಗಳಿಗೆ ಇನ್ನಷ್ಟು ಸನ್ನದ್ಧರಾಗಬಹುದು. ಕಲಿಯುವುದನ್ನು ಎಂದಿಗೂ ನಿಲ್ಲಿಸಬಾರದು ಎಂಬ ಕರೆ ನೀಡಿದರು.
ಮಧುರಾ ಮತ್ತು ಬಳಗ ಪ್ರಾರ್ಥಿಸಿದರು. ಪಿನ್ಯಾಕಲ್ ಐಟಿ ಕ್ಲಬ್‌ನ ಅಧ್ಯಕ್ಷ ರಜನೀಶ್ ಎಸ್. ಸ್ವಾಗತಿಸಿ, ಅತಿಥಿಯ ಪರಿಚಯ ಮಾಡಿದರು. ಕಾರ್ಯದರ್ಶಿ ವೈಷ್ಣವಿ ಶೆಟ್ಟಿ 2026-27ನೇ ಶೈಕ್ಷಣಿಕ ವರ್ಷದಲ್ಲಿ ಐಟಿ ಕ್ಲಬ್‌ನ ವತಿಯಿಂದ ಆಯೋಜಿಸಲ್ಪಡುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷ ಆಶ್ಲೇಶ್ ಕೆ. ವಂದಿಸಿದರು. ತ್ರಿಷಾ ಕೆ.ಬಿ. ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ಗಣಕವಿಜ್ಞಾನ ವಿಭಾಗದ ಡೀನ್ ಡಾ. ವಿನಯಚಂದ್ರ ಐಟಿ ಕ್ಷಬ್‌ನ ಸಂಯೋಜಕಿ ಡಾ. ಗೀತಾ ಪೂರ್ಣಿಮಾ ಕೆ. ಮತ್ತು ಶ್ರದ್ಧಾ ಎಸ್., ಉಪಾಧ್ಯಕ್ಷ ಸಂದೀಪ್, ಜತೆ ಕಾರ್ಯದರ್ಶಿ ಚರಣ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


