ಸಚಿವ ನಾಗೇಂದ್ರ ರಾಜೀನಾಮೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ
ಅವರು ವಾಲ್ಮೀಕಿ ನಿಗಮದ ಲೂಟಿಯ ರುವಾರಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಭ್ರಷ್ಟ ಹಾಗೂ ಬಡವರ ವಿರೋಧಿ ಕಾಂಗ್ರೆಸ್ ಸರಕಾರ ವೈಫಲ್ಯಗಳ ವಿರುದ್ಧ ಬಿಜೆಪಿ ಮಂಗಳೂರು ಮಂಡಲ ವತಿಯಿಂದ ತೊಕ್ಕೊಟ್ಟುವಿನಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಸಚಿವ ಸ್ಥಾನದಲ್ಲಿದ್ದಾಗಲೇ ವಾಲ್ಮೀಕಿ ನಿಗಮದ ೮೯.೬೩ ಕೋಟಿ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿದ ಆರೋಪ ಹೊತ್ತು ಜೈಲಿಗೆ ಹೋಗಿದ್ದ ಕಳಂಕಿತ ಶಾಸಕ ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡಿಸಿರುವುದು ನಾಚಿಕೆಕೇಡಿನ ವಿಚಾರವಾಗಿದೆ. ಕಾಂಗ್ರೆಸಿನವರು ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಕೊಡುತ್ತೇವೆಂದು ಹೇಳಿ ಜನರಲ್ಲಿ ಓಟು ಕೇಳಿದ್ದರು. ಆದರೆ ಇದೀಗ ಭ್ರಷ್ಟಾಚಾರ ಆರೋಪ ಹೊತ್ತವರನ್ನೇ ಸಚಿವರನ್ನಾಗಿಸುವ ಮೂಲಕ ಮುಖ್ಯಮಂತ್ರಿ ಡಿಕೆಶಿ ಅವರೇ ಭ್ರಷ್ಟಾಚಾರಕ್ಕೆ ಬೆಂಬಲ ನೀಡಿದರೇ ಎಂಬ ಸಂಶಯ ಮೂಡಿದೆ ಎಂದು ಹೇಳಿದರು.
ಧ್ವಜಾರೋಹಣ ಮಾಡಲು ಸಾಧ್ಯ ಆಗದ ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ನೀಡಿದ್ದು ನಾಚಿಕೆ ಆಗಬೇಕು ಎಂದ ಅವರು ಇಂದಿರಾ ಕ್ಯಾಂಟೀನ್ ಅಸ್ತಿತ್ವಕ್ಕೆ ತಂದ ಸರ್ಕಾರ ಅಲ್ಲಿರುವ ಆಹಾರದ ಬಗ್ಗೆ ಪರಿಶೀಲನೆ ಮಾಡಿಲ್ಲ. ಅಲ್ಲದೇ ಹೆದ್ದಾರಿ ಬದಿಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿ ಜನರ ತೆರಿಗೆ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಡಿಕೆಶಿ ಜನರಿಗೆ ಸಿಗಬೇಕಾದ ಸವಲತ್ತುಗಳನ್ನು ನೀಡದೇ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಶಾಸಕ ಜಯರಾಮ್ ಶೆಟ್ಟಿ ಮಾತನಾಡಿ, ಮುಖ್ಯಮಂತ್ರಿ ಡಿಕೆಶಿ ಅವರು ಸಚಿವ ಸ್ಥಾನದಿಂದ ನಾಗೇಂದ್ರರನ್ನು ಕೈಬಿಟ್ಟು ಹೊಸಬರನ್ನು ನೇಮಕ ಮಾಡಬೇಕು. ಅವರು ವಾಲ್ಮೀಕಿ ಹಗರಣದ ರೂವಾರಿ. ಇದನ್ನು ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದರು. ಅಲ್ಲದೆ ರಾಜ್ಯ ಸರ್ಕಾರ ಅಭಿವೃದ್ಧಿಗೆ ಒತ್ತು ಕೊಡುತ್ತಿಲ್ಲ. ಕಡಲ್ಕೊರೆತ ಶಾಶ್ವತ ತಡೆಗೋಡೆ ನಿರ್ಮಾಣ ಮಾಡದೇ ಅನ್ಯಾಯ ಎಸಗಿದೆ ಎಂದು ಆರೋಪಿಸಿದರು.
ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವತ್ತಬೈಲ್ ಮಾತನಾಡಿ, ಸರ್ಕಾರಿ ಸಿಬ್ಬಂದಿಗೆ ಸರಿಯಾಗಿ ವೇತನ ಪಾವತಿಸದ ಸರ್ಕಾರ ತಾಲೂಕು ಕಚೇರಿ ಯಲ್ಲಿ ಸುಸಜ್ಜಿತ ವ್ಯವಸ್ಥೆ ಕೂಡ ಮಾಡಿಲ್ಲ. ಜನರು ತಾ.ಪಂ.ಕಚೇರಿಗೆ ಹೋದರೆ ನಿಂತುಕೊಂಡೇ ತಮ್ಮ ಕೆಲಸ ಮಾಡಿಸಬೇಕಾದ ಪರಿಸ್ಥಿತಿ ಬಂದಿದೆ. ಅಭಿವೃದ್ಧಿಗೆ ಒತ್ತು ಕೊಡದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಧನಲಕ್ಷ್ಮಿ ಗಟ್ಟಿ, ಜಿ. ದಯಾನಂದ್ ತೊಕ್ಕೊಟ್ಟು, ರವಿಶಂಕರ್ ಸೋಮೇಶ್ವರ, ಜೀವನ್ ಕುಮಾರ್, ಪೂಜಾ ಪೈ, ದಿವ್ಯ ಸತೀಶ್, ಹೇಮಂತ್ ಶೆಟ್ಟಿ, ಮನೋಜ್ ಆಚಾರ್ಯ, ಸುಮನ ಮನೋಜ್ ಶೆಟ್ಟಿ, ಪುರುಷೋತ್ತಮ ಗಟ್ಟಿ, ನಿತ್ಯಾನಂದ ಭಂಡಾರಿ, ಶೈಲೇಶ್ ಶೆಟ್ಟಿ ತಲಪಾಡಿ ಮತ್ತಿತರರು ಉಪಸ್ಥಿತರಿದ್ದರು.