ಪುತ್ತೂರು ಘಟನೆ ಹಿಂದೂ ಸಮಾಜವನ್ನು ಬೆದರಿಸುವ ಕಾರ್ಯತಂತ್ರ

ಪುತ್ತೂರು ಘಟನೆ ಹಿಂದೂ ಸಮಾಜವನ್ನು ಬೆದರಿಸುವ ಕಾರ್ಯತಂತ್ರ


ಪುತ್ತೂರು: ಪುತ್ತೂರಿನಲ್ಲಿ ನಡೆದಿರುವ ಘಟನೆಯು ಅತ್ಯಂತ ದೌರ್ಭಾಗ್ಯಕರ ಹಾಗೂ ಹಿಂದೂ ಸಮಾಜಕ್ಕೆ ಎಚ್ಚರಿಕೆಯ ಸಂಗತಿಯಾಗಿದೆ. ಇದೊಂದು ಸಣ್ಣ ಘಟನೆಯಲ್ಲ. ಮುಂದೆ ನಡೆಯುವುರ ಸೂಚನೆಯಾಗಿದೆ. ಈ ಘಟನೆಯು ಹಿಂದೂ ಸಮಾಜವನ್ನು ಬೆದರಿಸುವ ಕಾರ್ಯತಂತ್ರವಾಗಿದೆ. ಹಿಂದೂ ಸಮಾಜ ಎಲ್ಲಾ ರೀತಿಯಿಂದಲೂ ಎಚ್ಚರಿಕೆ ವಹಿಸಬೇಕು ಎಂದು ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. 

ಅವರು ತನ್ನ ಪತ್ನಿಯೊಂದಿಗೆ ದರ್ಬೆಯಲ್ಲಿ ನಡೆದ ಗಲಾಟೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಅಂಜನಾ ಪೈ ಅವರನ್ನು ಗುರುವಾರ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಬಳಿಕ ಮಾದ್ಯಮದೊಂದಿಗೆ ಮಾತನಾಡಿ, ಓರ್ವ ಹೆಣ್ಣು ಮಗಳ ಮೇಲೆ ಅಕ್ರಮ ನಡೆದಾಗ ಸರ್ಕಾರ ಮತ್ತು ಪೊಲೀಸರು ಯಾರಿಗೆ ಸಹಾಯ ಮಾಡಬೇಕು. ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ಮಾಡಿಕೊಳ್ಳುವ ವಾತಾವರಣ ಇಲ್ಲದಂತಾಗಿದೆ. ತಂದೆ ತಾಯಿಗೆ ಹೊಡೆದಾಗ ಮಗ ಸುಮ್ಮನೆ ಕುಳಿತುಕೊಳ್ಳಬೇಕಾ? ಏನಾದ್ರೂ ಮಾಡಬೇಕಾ ಎಂಬುದನ್ನು ಇಲ್ಲಿನ ಎಸ್‌ಪಿ ಅಥವಾ ಸರ್ಕಾರ ಹೇಳಬೇಕು ಎಂದರು. 

ಹಿಂದೂಗಳು ಆಕ್ರಮಣಕ್ಕೆ ಹೋಗುವುದಿಲ್ಲ. ಆದರೆ ನಮ್ಮ ಮೇಲೆ ಆಕ್ರಮಣಗಳು ನಡೆದಾಗ ನಾವು ಪಾಕಿಸ್ತಾನ, ಬಾಂಗ್ಲಾದವರಂತೆ ಓಡಬೇಕಾ ಎಂದು ಪ್ರಶ್ನಿಸಿದ ಅವರು ಆಕ್ರಮಣಗಳು ನಡೆದಾಗ ದೂರು ನೀಡುವುದು ಸಹಜ ಮತ್ತು ಹಕ್ಕು. ಅದರಂತೆ ಅಂಜನಾ ಪೈ ದೂರು ನೀಡಿದ್ದಾರೆ. ಪೊಲೀಸರು ಗೂಂಡಾಗಳನ್ನು ಹತ್ತಿಕ್ಕುವ ಕೆಲಸ ಮಾಡಬೇಕು. ಆದರೆ ದೂರು ನೀಡಿದ ಅಂಜನಾ ಪೈ ಅವರ ಪುತ್ರನ ಮೇಲೆ 307 ಕೇಸು ದಾಖಲಿಸಿರುವುದು ಸರಿಯಲ್ಲ. ಈ ಮೂಲಕ ಪೊಲೀಸರಿಂದ ತಪ್ಪಾಗಿದೆ. ಇಲ್ಲಿ ಒಳ್ಳೆಯ ಎಸ್‌ಪಿ ಇದ್ದಾರೆ. ಅವರ ಮೇಲಿನ 307 ಕೇಸು ತೆಗೆಯಬೇಕು ಎಂದು ಆಗ್ರಹಿಸಿದರು.

ಆ.31 ರಂದು ಎರಡು ಸಂಘಟನೆಗಳು ಮೆರವಣಿಗೆ ಮಾಡಲು ಹೊರಟಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಾ. ಪ್ರಭಾಕರ ಭಟ್ ಅವರು ಒಬ್ಬರು ಮೆರವಣಿಗೆ ಸಮಯ ನಿಗದಿಪಡಿಸಿದ ಹೊತ್ತಿನಲ್ಲಿಯೇ ಇನ್ನೊಬ್ಬರು ಮೆರವಣಿಗೆ ಮಾಡಲು ಅವಕಾಶ ಕೇಳುವುದು ಸರಿಯಲ್ಲ. ಪೊಲೀಸರು ಅವರಿಗೆ ಸಮಯ ಬದಲಾವಣೆ ಮಾಡಿ ಅವಕಾಶ ನೀಡಲಿ ಅಥವಾ ಬೇರೆ ರಸ್ತೆಯಲ್ಲಿ ಮೆರವಣಿಗೆ ನಡೆಸಲು ಅವಕಾಶ ಕೊಡಲಿ. ಇಲ್ಲಿ ಹಿಂದೂಗಳಿಗೆ ಮಾತ್ರ ಸೌಹಾರ್ದತೆಯಲ್ಲ. ಎಲ್ಲರಿಗೂ ಇರಬೇಕು. ಇದಕ್ಕೆ ಸರಿಯಾಗಿ ಪೊಲೀಸರು ಇರಬೇಕು. ಕಾನೂನು ನ್ಯಾಯಯುತವಾಗಿ ಇರಬೇಕು. ಇಲ್ಲದಿದ್ದಲ್ಲಿ ಭಸ್ಮಾಸುರನ ಕತೆ ಆಗಲಿದೆ. ನಾವು ಶಂಡರಂತೆ ಹೇಡಿಗಳಂತೆ ಕುಳಿತುಕೊಳ್ಳಲು ಆಗುವುದಿಲ್ಲ. ಪುತ್ತೂರಿನಲ್ಲಿ ನಡೆಯಲಿರುವ ಮೆರವಣಿಗೆಗೆ ತನ್ನ ಸಂಪೂರ್ಣ ಬೆಂಬಲವಿದೆ. ಪೊಲೀಸರು ಮೆರವಣಿಗೆಗೆ ಅನುಮತಿ ಮತ್ತು ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ನಗರಸಭಾ ಮಾಜಿ ಸದಸ್ಯ ಭಾಮಿ ಅಶೋಕ್ ಶೆಣೈ ಮತ್ತಿತರರು ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article