ವಂದೇ ಭಾರತ್ ರೈಲು ಓಡಾಟದ ಕನಸು ಶೀಘ್ರ ನನಸಾಗಲಿದೆ: ಸಂಸದ ಕ್ಯಾ. ಚೌಟ

ವಂದೇ ಭಾರತ್ ರೈಲು ಓಡಾಟದ ಕನಸು ಶೀಘ್ರ ನನಸಾಗಲಿದೆ: ಸಂಸದ ಕ್ಯಾ. ಚೌಟ

ಪುತ್ತೂರು: ರಾಜ್ಯದ ಅತ್ಯಂತ ಪ್ರಮುಖ ರೈಲ್ವೇ ಮಾರ್ಗವಾಗಿರುವ ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಓಡಾಟ ಅತೀ ಶೀಘ್ರದಲ್ಲಿಯೇ ನನಸಾಗಲಿದೆ. ಈಗಾಗಲೇ ರೈಲ್ವೇ ಹಳಿ ವಿದ್ಯುದೀಕರಣಗೊಂಡು ರೈಲಿನ ಪ್ರಾಯೋಗಿಕ ಸಂಚಾರವನ್ನೂ ನಡೆಸಲಾಗಿದೆ. ಮಂಗಳೂರು-ಸುಬ್ರಹ್ಮಣ್ಯ ನಡುವಣ ವಿದ್ಯುದೀಕರಣ ಪೂರ್ತಿಯಾಗಿ ವಿದ್ಯುತ್ ಪೂರೈಕೆಯ ಕಾರ್ಯವೂ ನಡೆದಿದೆ. ಕಠಿಣ ಪ್ರದೇಶವಾಗಿರುವ ಘಾಟಿನಲ್ಲಿಯೂ ವಿದ್ಯುದೀಕರಣದ ವ್ಯವಸ್ಥೆಯಾಗಿದೆ. 2-3 ಬಾರಿ ಪ್ರಾಯೋಗಿಕ ಓಡಾಟವೂ ನಡೆದಿದೆ. ಏರ್ ಬ್ರೇಕಿಂಗ್ ಪರೀಕ್ಷೆಯೂ ಪೂರ್ಣಗೊಂಡಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಅವರು ಸೋಮವಾರ ಪುತ್ತೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿ, ಕೇಂದ್ರದಲ್ಲಿ ಮೋದಿ ಆಡಳಿತದಲ್ಲಿ ರೈಲ್ವೇ ಮೇಲ್ದರ್ಜೆ ಕಾರ್ಯ ಅತ್ಯಂತ ವೇಗವಾಗಿ ನಡೆಯುತ್ತಿದೆ. 

ಮುಂದೆ ವಂದೇ ಭಾರತ್ ರೈಲಿನ ಓಡಾಟಕ್ಕೆ ಸಮಯ, ವೇಳಾಪಟ್ಟಿಯನ್ನು ನಿಗದಿ ಮಾಡುವ ಕಾರ್ಯವನ್ನು ಶೀಘ್ರ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಜತೆಗೆ ಮಂಗಳೂರು-ಬೆಂಗಳೂರು ಮಧ್ಯೆ ಮುಂದಿನ ದಿನಗಳಲ್ಲಿ ರೈಲ್ವೇ ಹಳಿಯನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ರೈಲ್ವೇ ಸಚಿವರ ಜತೆಗೆ ಮಾತನಾಡಿದ್ದು, ಲೋಕಸಭೆಯಲ್ಲಿ ಆಗ್ರಹ ಮಾಡಿದ ವೇಳೆ ದ್ವಿಗುಣಗೊಳಿಸುವ ಕಾರ್ಯಕ್ಕೆ ಫೈನಲ್ ಲೊಕೇಶನ್ ಸರ್ವೆಗೆ ಆದೇಶವಾಗಿದೆ ಎಂಬ ಉತ್ತರ ನೀಡಿದ್ದಾರೆ. ಪ್ರಸ್ತುತ ಘಾಟ್ ಭಾಗದಲ್ಲಿ ಹಳಿಯು 1:50 ಗ್ರೆಡಿಯೆಂಟ್ ಇದ್ದು, ಅದನ್ನು 1:150 ಮಾಡಿ ರೈಲ್ವೇ ಹಳಿಯನ್ನು ಅಭಿವೃದ್ಧಿ ಪಡಿಸಲು ಆಗ್ರಹಿಸಲಾಗಿದೆ. 

ಮಂಗಳೂರು ಭಾಗದ ರೈಲ್ವೇ ವ್ಯವಸ್ಥೆಯು ದಕ್ಷಿಣ, ನೈಋತ್ಯ, ಕೊಂಕಣ್ ರೈಲ್ವೆಯ ಮಧ್ಯೆ ಆಡಳಿತಾತ್ಮಕವಾಗಿ ಹಂಚಿ ಹೋಗಿದ್ದು, ದಕ್ಷಿಣದ ಭಾಗವನ್ನು ನೈಋತ್ಯದೊಂದಿಗೆ ವಿಲೀನಗೊಳಿಸಲಾಗಿದೆ. ಇದು ಮುಂದಿನ ದಿನಗಳಲ್ಲಿ ಇಲ್ಲಿನ ರೈಲ್ವೇ ಮೂಲಸೌಕರ್ಯ ಅಭಿವೃದ್ಧಿಯ ಅಮೂಲಾಗ್ರ ಪರಿವರ್ತನೆಗೆ ಐತಿಹಾಸಿಕ ತೀರ್ಮಾನ ಎನಿಸಿಕೊಂಡಿದೆ ಎಂದರು. 

ದಕ್ಷಿಣ ರೈಲ್ವೇಯ 20 ಕಿ.ಮೀ.ಭಾಗವನ್ನು ನೈಋತ್ಯ ರೈಲ್ವೆಗೆ ನೀಡಿದ್ದು, ಮುಂದಿನ ದಿನಗಳಲ್ಲಿ ಕೊಂಕಣ್ ರೈಲ್ವೇ ಕೂಡ ಭಾರತೀಯ ರೈಲ್ವೇ ಜತೆಗೆ ವಿಲೀನವಾಗಬೇಕು ಎಂದು ನಾನು ಸಹಿತ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ.ರಾಘವೇಂದ್ರ ಅವರು ಒಟ್ಟಾಗಿ ಆಗ್ರಹ ಮಾಡಿದ್ದೇವೆ. ಈ ಭಾಗವನ್ನು ನೈಋತ್ಯ ರೈಲ್ವೆಗೆ ವಿಲೀನ ಮಾಡಿರುವುದರಿಂದ ರೈಲ್ವೇ ಮೂಲಸೌಕರ್ಯ ಅಭಿವೃದ್ಧಿಯ ಜತೆಗೆ ಯೋಜನೆ ಹಾಕಿಕೊಳ್ಳಲು, ಉತ್ತಮ ರೈಲ್ವೇ ಸೇವೆ ನೀಡಲು ಏಕ ತೀರ್ಮಾನದ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂದರು.

ಕ್ಷುಲ್ಲಕ ರಾಜಕೀಯ ಇಲ್ಲ..

ವಿಲೀನಕ್ಕೆ ಕೇರಳದ ವಿರೋಧಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಂಸದರು, ಈ ವಿಚಾರವನ್ನು ಕೇರಳ-ಕರ್ನಾಟಕ ಎಂದು ಪ್ರತ್ಯೇಕ ಮಾಡುವುದಕ್ಕೆ ನಾನು ಯೋಚನೆ ಮಾಡುವುದಿಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ಆಡಳಿತಾತ್ಮಕ ಬದಲಾವಣೆ ಮಾಡಿದ ಕಾರ್ಯವಾಗಿದೆ.  ಅದರಲ್ಲಿ ಕ್ಷುಲಕ ರಾಜಕೀಯ ಮಾಡಲು ನಾನು ಬಯಸುವುದಿಲ್ಲ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article