ಶಿಕಾರಿಪುರದಲ್ಲಿ ಗೋರಕ್ಷಕರ ಮೇಲಿನ ಕೊಲೆಯತ್ನ ಖಂಡನೀಯ: ಕರ್ನಾಟಕದಲ್ಲಿ ಅಕ್ರಮ ಕಸಾಯಿಖಾನೆಗಳನ್ನು ಸಂಪೂರ್ಣ ಬಂದ್ ಮಾಡಲು ವಿಹೆಚ್‌ಪಿ ಆಗ್ರಹ
ಈ ಸಂಬಂಧ ಘಟನೆಯಲ್ಲಿ ಭಾಗಿಯಾದ ಎಲ್ಲಾ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ರಾಜ್ಯಾದ್ಯಂತ ಕಾರ್ಯಾಚರಿಸುತ್ತಿರುವ ಅಕ್ರಮ ಕಸಾಯಿಖಾನೆಗಳನ್ನು ಕೂಡಲೇ ಬಂದ್ ಮಾಡುವಂತೆ ಒತ್ತಾಯಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರಿಗೆ ಆ.24 ರಂದು ಮನವಿ ಸಲ್ಲಿಸಲಾಯಿತು.
ಆ.15 ರಂದು ಶಿಕಾರಿಪುರ ತಾಲೂಕಿನಲ್ಲಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ವಧೆಗೆ ಸಾಗಿಸುತ್ತಿದ್ದ ವಾಹನವನ್ನು ತಡೆದು ರಕ್ಷಿಸಲು ಯತ್ನಿಸಿದ ಗೋರಕ್ಷಕರ ಮೇಲೆ ಪೂರ್ವನಿಯೋಜಿತವಾಗಿ ಮಾರಕಾಸ್ತ್ರಗಳಿಂದ ಭೀಕರ ದಾಳಿ ನಡೆಸಿ, ವಾಹನವನ್ನು ಧ್ವಂಸಗೊಳಿಸಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಲಾಗಿದೆ. ರಾಜ್ಯದಲ್ಲಿ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020’ ಜಾರಿಯಲ್ಲಿದ್ದರೂ ಸಹ, ಯಾವುದೇ ಪರವಾನಗಿ ಇಲ್ಲದೆ ನಿರಂತರವಾಗಿ ಅಕ್ರಮ ಗೋಸಾಗಾಟ ಹಾಗೂ ಅಕ್ರಮ ಕಸಾಯಿಖಾನೆಗಳು ನಡೆಯುತ್ತಿರುವುದು ಕಾನೂನು ಮತ್ತು ಸುವ್ಯವಸ್ಥೆಗೆ ದೊಡ್ಡ ಸವಾಲಾಗಿದೆ.
ಮನವಿಯಲ್ಲಿ ಗೋರಕ್ಷಕರ ಮೇಲೆ ಕೊಲೆ ಯತ್ನ ನಡೆಸಿದ ಎಲ್ಲಾ ಆರೋಪಿಗಳನ್ನು ಹಾಗೂ ಇದರ ಹಿಂದಿರುವ ಸಂಚುಕೋರರನ್ನು ತಕ್ಷಣವೇ ಬಂಧಿಸಿ, ಜಾಮೀನು ರಹಿತ ಕಠಿಣ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಬೇಕು., ಜಾನುವಾರು ಹತ್ಯೆ ಪ್ರತಿಬಂಧಕ ಕಾಯಿದೆ 2020ರ ಸೆಕ್ಷನ್ 8ರ ಪ್ರಕಾರ, ಅಕ್ರಮ ಗೋಕಳ್ಳತನ ಹಾಗೂ ಕಸಾಯಿಖಾನೆ ನಡೆಸುತ್ತಿರುವ ಕಿಡಿಗೇಡಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು., ರಾಜ್ಯದಾದ್ಯಂತ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ನಡೆಯುತ್ತಿರುವ ಎಲ್ಲಾ ಕಸಾಯಿಖಾನೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾಂಸ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ, ಸಂಪೂರ್ಣವಾಗಿ ಬಂದ್ ಮಾಡಿಸಬೇಕು., ಅಕ್ರಮ ಗೋಸಾಗಾಟ ತಡೆಯಲು ರಾಜ್ಯದ ಸೂಕ್ಷ್ಮ ಪ್ರದೇಶಗಳು ಮತ್ತು ಗಡಿ ಭಾಗಗಳಲ್ಲಿ ಪೊಲೀಸ್ ರಾತ್ರಿ ಗಸ್ತು ಹೆಚ್ಚಿಸಬೇಕು ಮತ್ತು ಸಿಸಿಟಿವಿ ಅಳವಡಿಸಿದ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಬೇಕು.
ಗೋರಕ್ಷಕರ ಮೇಲಿನ ಇಂತಹ ಹೇಯ ಕೃತ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮಂಗಳೂರು ಮಹಾನಗರ ಕಾರ್ಯಾಧ್ಯಕ್ಷ ಮನೋಹರ್ ಸುವರ್ಣ ಮತ್ತು ಮಂಗಳೂರು ಗ್ರಾಮಾಂತರ ಕಾರ್ಯಾಧ್ಯಕ್ಷ ಗೋಪಾಲ್ ಕುತ್ತಾರ್ ಎಚ್ಚರಿಸಿದ್ದಾರೆ.