ಸಂತ ಫಿಲೋಮಿನಾ ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಐಸಿಟಿ ಮೂಲಕ ಬೋಧನಾ-ಕಲಿಕಾ ಪದ್ಧತಿಗಳ ಪರಿವರ್ತನೆ ಐದು ದಿನಗಳ ಎಫ್‌ಡಿಪಿ
ಕಾರ್ಯಕ್ರಮದಲ್ಲಿ ಅಧ್ಯಾಪಕರಿಗೆ ವಿವಿಧ ಎಐ ಪರಿಕರಗಳನ್ನು ಪ್ರಾಯೋಗಿಕವಾಗಿ ಬಳಸುವ ಅವಕಾಶ ಕಲ್ಪಿಸಲಾಯಿತು. ಪಾಠಯೋಜನೆ, ಬೋಧನಾ ಸಂಪನ್ಮೂಲಗಳು, ಮೌಲ್ಯಮಾಪನ, ದೃಶ್ಯ ವಿಷಯಗಳು ಹಾಗೂ ಡಿಜಿಟಲ್ ಪೋರ್ಟ್ಫೋಲಿಯೊಗಳನ್ನು ಸ್ವತಃ ಸಿದ್ಧಪಡಿಸುವ ಮೂಲಕ ತರಬೇತಿಯನ್ನು ಅನುಭವಾತ್ಮಕವಾಗಿ ರೂಪಿಸಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊರವರು ‘ಕಲಿಕೆ ಎಂಬುದು ನಿರಂತರ ಪ್ರಕ್ರಿಯೆಯಾಗಿದ್ದು, ಅಧ್ಯಾಪಕರು ಸದಾ ಹೊಸ ವಿಚಾರಗಳು ಮತ್ತು ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಕಾಲೇಜಿನಲ್ಲಿ ನವೀನ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹವಿದ್ದು, ಅಧ್ಯಾಪಕರು ಕೈಗೊಳ್ಳುವ ಪ್ರತಿಯೊಂದು ಪ್ರಯತ್ನವೂ ಅಂತಿಮವಾಗಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ಉತ್ತಮ ಫಲಿತಾಂಶವನ್ನು ನೀಡಬೇಕು ಎಂದ ಅವರು ಪ್ರಾಧ್ಯಾಪಕರ ಕೌಶಲ್ಯಾಭಿವೃಧಿಗೆ ಕಾಲೇಜು ನಿರಂತರ ಪ್ರೋತ್ಸಾಹ ನೀಡುತ್ತಿದ್ದು ಅಧ್ಯಾಪಕರು ತಮಗೆ ದೊರೆಯುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ. ಎಡ್ವಿನ್ ಎಸ್. ಡಿ’ಸೋಜ ಸ್ವಾಗತಿಸಿ, ಪ್ರಾಸ್ತವಿಕ ಮಾತುಗಳನ್ನಾಡಿದರು. ಡಾ. ವಿನಯಚಂದ್ರ ವಂದಿಸಿದರು. ಡಾ. ಗೀತಾ ಪೂರ್ಣಿಮಾ ಕೆ. ಕಾರ್ಯಕ್ರಮ ನಿರೂಪಿಸಿದರು. ಎಫ್‌ಡಿಪಿಯಲ್ಲಿ ಭಾಗವಹಿಸಿದ ಡಾ. ಭಾರತಿ ಎಸ್. ರೈ, ಡಾ. ರಾಧಾಕೃಷ್ಣ ಗೌಡ ವಿ., ಜಾನ್ಸನ್ ಡೇವಿಡ್ ಸಿಕ್ವೇರಾ, ಧನ್ಯ ಪಿ.ಟಿ., ತೇಜಸ್ವಿ ಭಟ್, ಹಾಗೂ ಶಿವಾನಿ ಮಲ್ಯ ಅನಿಸಿಕೆ ವ್ಯಕ್ತಪಡಿಸಿದರು.
ಐದು ದಿನಗಳ ಈ ಎಫ್‌ಡಿಪಿ ಅಧ್ಯಾಪಕರಲ್ಲಿ ತಂತ್ರಜ್ಞಾನ ಆಧಾರಿತ ಬೋಧನಾ ಕೌಶಲ್ಯ, ಎಐ ಬಳಕೆಯ ಸಾಮರ್ಥ್ಯ ಹಾಗೂ ನವೀನ ಬೋಧನಾ ವಿಧಾನಗಳ ಕುರಿತು ಅರಿವು ಹೆಚ್ಚಿಸುವಲ್ಲಿ ಮಹತ್ವದ ವೇದಿಕೆಯಾಯಿತು.


