ಅಡಿಕೆ ತೋಟಗಳಿಗೆ ಮಂಗಗಳ ಕಾಟ, ಪುತ್ತೂರು ಜನತೆಗೆ ಬಿಜೆಪಿ-ಸಂಘಪರಿವಾರದ ‘ಕಾಟ’: ಅಮಳ ರಾಮಚಂದ್ರ

ಅಡಿಕೆ ತೋಟಗಳಿಗೆ ಮಂಗಗಳ ಕಾಟ, ಪುತ್ತೂರು ಜನತೆಗೆ ಬಿಜೆಪಿ-ಸಂಘಪರಿವಾರದ ‘ಕಾಟ’: ಅಮಳ ರಾಮಚಂದ್ರ


ಪುತ್ತೂರು: ದರ್ಬೆಯ ಪ್ರಕರಣವನ್ನು ಕೋಮುರಾಜಕೀಯ ಬಳಕೆ ಮಾಡಲಾಗುತ್ತಿದ್ದು, ಅಡಿಕೆ ಬೆಳೆಗಾರರಿಗೆ ಹಂದಿ ಮತ್ತು ಮಂಗಗಳ ಕಾಟವಾದರೆ ಪುತ್ತೂರಿಗೆ ಬಿಜೆಪಿ ಮತ್ತು ಸಂಘಪರಿವಾರದ ಕಾಟ ವಿಪರೀತವಾಗಿದೆ. ಪುತ್ತೂರಿನ ಘಟನೆಗೆ ಕೋಮುಬಣ್ಣ ಹಚ್ಚುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಿದ್ದು, ದರ್ಬೆಯಲ್ಲಿ ಕೊಲೆ ಸುಲಿಗೆ ಅತ್ಯಾಚಾರ ಅನಾಚಾರ ನಡೆದಿಲ್ಲ. ಸಣ್ಣಮಟ್ಟಿನ ತಳ್ಳಾಟವನ್ನು ದೊಡ್ಡ ವಿಷಯವಾಗಿಸಿ ಗಲಭೆ ನಡೆಸಲು ಬಿಜೆಪಿ ಮತ್ತು ಸಂಘಪರಿವಾರ ಮುಂದಾಗಿದೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಆರೋಪಿಸಿದ್ದಾರೆ.

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿನ ಕಾಂಗ್ರೇಸ್ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೆ ಬಿಜೆಪಿಯವರು ಓಟು ಬ್ಯಾಂಕ್ ರಾಜಕಾರuಕ್ಕಾಗಿ ಮತಗಳ ಧ್ರುವೀಕರಣಗೊಳಿಸಲು ಇಂತಹ ಕೋಮು ರಾಜಕಾರಣ ನಡೆಸುತ್ತಿದ್ದಾರೆ. ದರ್ಭೆಯಲ್ಲಿ ನಡೆದ ಘಟನೆಯ ಪ್ರತೀ ಅಂಶಗಳೂ ಸಿಸಿ ಕ್ಯಾಮರಾ ಫೂಟೇಜ್ ನಿಂದಾಗಿ ಬಹಿರಂಗವಾಗಿದೆ. ಈ ಅಂಗಡಿಗೆ ಬಂದ ಗ್ರಾಹಕರು ಲ್ಯಾಮಿನೇಷನ್ ಮಾಡಲಾದ ದಾಖಲೆ ಹಾಳಾಗಿರುವ ಬಗ್ಗೆ ಅದನ್ನು ಸರಿಪಡಿಸಿಕೊಡಿ, ಇಲ್ಲವೇ ಪರಿಹಾರ ಕೊಡಿ ಎಂದು ಕೇಳಿದ್ದು, ನೈಜತೆಗಾಗಿ ವಿಡೀಯೋ ಮಾಡಿದ್ದು ತಪ್ಪೇ, ಅಥವಾ ಮೊಬೈಲ್ ಕಿತ್ತೆಸದ್ದು, ಮತ್ತು ಟೇಬಲ್ ಮೇಲೆ ಹಾರಿ ಆತನಿಗೆ ಹೊಡೆದದ್ದು, ಬಿಡಿಸಲು ಹೋದವರು ಜೀಪಿಗೆ ನುಗ್ಗಿದ್ದು ತಪ್ಪೇ ಎಂಬುವುದು ಸಾರ್ವಜನಿಕವಾಗಿ ಬಟ್ಟ ಬಯಲಾಗಿದೆ. ಕೇವಲ ಒಂದು ಧರ್ಮದವರು ಮಾತ್ರ ತಪ್ಪು ಮಾಡಿದ್ದಾ.. ಇಲ್ಲಿ ಕೋಮುವಾದ ನಡೆದಿತ್ತಾ ಎಂದು ಪುತ್ತೂರಿನ ಜನತೆಗೆ ಗೊತ್ತಾಗಿದೆ ಎಂದು ಹೇಳಿದರು.

ಈ ಒಂದು ಸಣ್ಣ ಪ್ರಕರಣವನ್ನು ಮುಂದಿಟ್ಟುಕೊಂಡು ರಣಹದ್ದುಗಳಂತೆ ಬಿಜೆಪಿ ನಾಯಕರು ಮತ್ತು ಸಂಘಪರಿವಾರದ ಮುಖಂಡರು ಸೇರಿಕೊಂಡು ಕೋಮುಪ್ರಚೋದನೆ ಮಾಡಲು ಮುಂದಾಗಿದ್ದಾರೆ. ಘಟನೆ ವೇಳೆ ಅಲ್ಲಿದ್ದವರು ಜೆಹಾದಿಗಳು, ಪಿಎಫ್‌ಐನವರು ಎಂದು ಇವರಿಗೆ ಗುರುತು ಮಾಡಿಕೊಟ್ಟವರು ಯಾರು.. ಅಲ್ಲದೆ ಇಡೀ ಘಟನೆಗೆ ಶಾಸಕರ ಜತೆ ಸಂಬಂಧ ಕಲ್ಪಿಸಿ ಅವರ ತಲೆಗೆ ಕಟ್ಟುವ ಪ್ರಯತ್ನ ನಡೆಸಲಾಗಿದೆ. ಈ ರೀತಿ ಬಿಜೆಪಿ ಘಟನೆಯನ್ನು ಹೈಜಾಕ್ ಮಾಡುತ್ತಿದೆ ಎಂದು ಆರೋಪಿಸಿದರು. 

ಬಿಜೆಪಿ ಬಂದ್ ಸಂಪೂರ್ಣ ವಿಫಲ:

ಬಿಜೆಪಿ ಮತ್ತು ಸಂಘಪರಿವಾರವು ಈದ್ ಮಿಲಾದ್ ಹಬ್ಬದ ದಿನವಾದ ಆ.25 ರಂದು ಪುತ್ತೂರು ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿದ್ದು, ಈ ಬಂದ್ ಸಂಪೂರ್ಣ ವಿಫಲವಾಗಿದೆ. ಇವರಿಗೆ ಜನಬೆಂಬಲ ಇಲ್ಲ ಎಂಬುವುದಕ್ಕೆ ಪುತ್ತೂರು ಬಂದ್ ಸಾಕ್ಷಿಯಾಗಿದೆ. ಪುತ್ತೂರು ಬಂದ್ ಮತ್ತು ಪುತ್ತೂರು ಚಲೋ ನೀಡುವ ಮೂಲಕ ಇಲ್ಲಿನ ವರ್ತಕರಿಗೆ ಮತ್ತು ಸಾಮಾನ್ಯ ಜನರಿಗೆ ಸಂಕಷ್ಟವನ್ನು ನೀಡುವ ಜತೆಗೆ ಜನರಿಗೆ ದ್ರೋಹ ಬಗೆಯುತ್ತಿದ್ದಾರೆ. ಇಲ್ಲಿನ ಜನರಿಗೆ ಕೋಮುವಾದ, ಗಲಾಟೆ ಬೇಕಾಗಿಲ್ಲ. ಅವರಿಗೆ ಶಾಂತಿ ಬೇಕಾಗಿದೆ. ರಾಜಕೀಯ ಉದ್ದೇಶದಿಂದ ಇಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಇವರನ್ನು ಪುತ್ತೂರಿನ ಜನತೆ ಕ್ಷಮಿಸುವುದಿಲ್ಲ ಎಂದರು.

ಸುದ್ದಿಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಕಾಂಗ್ರೇಸ್ ವಕ್ತಾರ ರಾಮ ಮೇನಾಲ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಜಾದ್, ಸಾಮಾಜಿಕ ಜಾಲತಾಣದ ಸುಪ್ರೀತ್ ಕಣ್ಣಾರಾಯ, ವಕ್ತಾರ ರವೀಂದ್ರ ರೈ ನೆಕ್ಕಿಲು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article