ಮಂಗಳೂರು ರೈಲ್ವೆ ಪ್ರದೇಶವನ್ನು ಮೈಸೂರು ವಿಭಾಗಕ್ಕೆ ಸೇರಿಸುವುದಷ್ಟೇ ಸಾಲದು, ಉತ್ತರ ಕರ್ನಾಟಕದ ಭಾಗಗಳಿಗೆ ಹೆಚ್ಚುವರಿ ರೈಲು ಸೇವೆ ಕಲ್ಪಿಸಲಿ: ಡಿವೈಎಫ್ಐ
ಮಂಗಳೂರು: ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲ್ವೆ ಪ್ರದೇಶವನ್ನು ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಆಡಳಿತ ವ್ಯಾಪ್ತಿಗೆ ಒಳಪಡಿಸಿದರಷ್ಟೇ ಸಾಲದು. ಮಂಗಳೂರನ್ನು ಕೇಂದ್ರೀಕರಿಸಿ ರಾಜ್ಯದ ವಿವಿಧ ಭಾಗಗಳಿಗೆ, ವಿಶೇಷವಾಗಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಭಾಗಗಳಿಗೆ ಹೆಚ್ಚುವರಿ ರೈಲು ಸೇವೆಗಳನ್ನು ಕಲ್ಪಿಸುವ ಕ್ರಮಗಳು ಒಳಗೊಳ್ಳಲು ಸಾಧ್ಯವಾಗಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಕೇಂದ್ರದ ರೈಲ್ವೇ ಇಲಾಖೆಯನ್ನು ಆಗ್ರಹಿಸಿದೆ.
ಕರ್ನಾಟಕದ ವಿವಿಧ ಮೂಲೆಗಳಿಂದ ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಗೆ ಲಕ್ಷಾಂತರ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ದುಡಿಮೆಯನ್ನು ಅರಸಿ ಆಗಮಿಸುತ್ತಿದ್ದಾರೆ. ಕಟ್ಟಡ ನಿರ್ಮಾಣ, ಕೈಗಾರಿಕೆ, ಹೋಟೆಲ್, ಗೃಹ ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಈ ಕಾರ್ಮಿಕರಿಗೆ ರೈಲು ಪ್ರಯಾಣವೇ ಕಡಿಮೆ ವೆಚ್ಚದ ಹಾಗೂ ಸುಲಭ ಸಾರಿಗೆ ವ್ಯವಸ್ಥೆಯಾಗಿದೆ. ಆದರೆ ಸಮರ್ಪಕ ರೈಲು ಸಂಪರ್ಕದ ಕೊರತೆಯಿಂದಾಗಿ ಅನಿವಾರ್ಯವಾಗಿ ಹೆಚ್ಚಿನ ದರದ ಬಸ್ ಪ್ರಯಾಣವನ್ನು ಅವಲಂಬಿಸುವಂತಾಗಿದೆ.
ಮಂಗಳೂರಿನಿಂದ ಕೇರಳ ಹಾಗೂ ತಮಿಳುನಾಡಿನ ವಿವಿಧ ಭಾಗಗಳಿಗೆ ಸಂಚರಿಸುವ ರೈಲುಗಳಿಗೆ ಹೋಲಿಸಿದರೆ, ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು, ಕಾರ್ಮಿಕರು, ವ್ಯಾಪಾರಿಗಳು ಸೇರಿದಂತೆ ಸಾವಿರಾರು ಪ್ರಯಾಣಿಕರು ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ.
ಕೇರಳದ ಜನಪ್ರತಿನಿಧಿಗಳು ಅಲ್ಲಿನ ಜನರ ರೈಲ್ವೆ ಬೇಡಿಕೆಗಳಿಗಾಗಿ ನಿರಂತರವಾಗಿ ಒತ್ತಡ ತಂದು ಹೆಚ್ಚುವರಿ ರೈಲು ಸೇವೆಗಳನ್ನು ಪಡೆದುಕೊಳ್ಳುತ್ತಿರುವಾಗ, ಕರ್ನಾಟಕದ ಜನಪ್ರತಿನಿಧಿಗಳು ಇದೇ ರೀತಿಯ ಕಾಳಜಿ ಮತ್ತು ಒತ್ತಡವನ್ನು ತೋರಿಸದಿರುವುದು ದುರಂತ. ಕರ್ನಾಟಕದ ಜನರ, ವಿಶೇಷವಾಗಿ ದುಡಿಯುವ ವರ್ಗದ ಪ್ರಯಾಣದ ಅಗತ್ಯಗಳನ್ನು ಪರಿಗಣಿಸಿ ರೈಲು ಸೇವೆಗಳನ್ನು ಹೆಚ್ಚಿಸುವಂತೆ ರಾಜ್ಯದ ಜನಪ್ರತಿನಿಧಿಗಳು ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆಯ ಮೇಲೆ ಒತ್ತಡ ಹೇರಬೇಕು.
ಮಂಗಳೂರಿನಿಂದ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ವಿಜಯಪುರ, ಕಲಬುರಗಿ, ರಾಯಚೂರು, ಬಳ್ಳಾರಿ ಸೇರಿದಂತೆ ಉತ್ತರ ಕರ್ನಾಟಕದ ಪ್ರಮುಖ ನಗರಗಳಿಗೆ ನೇರ ಹಾಗೂ ಹೆಚ್ಚುವರಿ ರೈಲು ಸೇವೆಗಳನ್ನು ಆರಂಭಿಸಬೇಕು. ಈಗಿರುವ ರೈಲುಗಳ ಸಂಚಾರದ ಅವಧಿ ಹಾಗೂ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ, ಕಾರ್ಮಿಕರು ಮತ್ತು ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಪ್ರಯಾಣಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು.
ಅಷ್ಟು ಮಾತ್ರವಲ್ಲದೆ ಇದರ ಜೊತೆಗೆ, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ಈವರೆಗೂ ಅಗತ್ಯಮಟ್ಟದಲ್ಲಿ ಉನ್ನತ ದರ್ಜೆಗೆ ಏರಿಸಿ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಸಮರ್ಪಕ ಪ್ಲಾಟ್‌ಫಾರಂ ವಿಸ್ತರಣೆ ಇಲ್ಲದ ಕಾರಣ ಉದ್ದದ ರೈಲುಗಳನ್ನು ನಿಲ್ದಾಣದಲ್ಲಿ ನಿಲ್ಲಿಸಲು ಸಾಧ್ಯವಾಗದೆ ಗೂಡ್ಸ್ ಶೆಡ್‌ನಲ್ಲಿ ನಿಲ್ಲಿಸುವ ಅನಿವಾರ್ಯತೆ ಎದುರಾಗುತ್ತಿದೆ. ಆದ್ದರಿಂದ ಮಂಗಳೂರು ಸೆಂಟ್ರಲ್‌ನ ಪ್ಲಾಟ್‌ಫಾರಂಗಳನ್ನು ಸಮರ್ಪಕವಾಗಿ ವಿಸ್ತರಿಸಿ, ನಿಲ್ದಾಣವನ್ನು ಉನ್ನತ ದರ್ಜೆಯ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಬೇಕು.
ಮಂಗಳೂರು ಕರಾವಳಿ ಕರ್ನಾಟಕದ ಪ್ರಮುಖ ವಾಣಿಜ್ಯ, ಶೈಕ್ಷಣಿಕ ಹಾಗೂ ಕೈಗಾರಿಕಾ ಕೇಂದ್ರವಾಗಿದ್ದು, ಉತ್ತರ ಕರ್ನಾಟಕದೊಂದಿಗೆ ಅದರ ರೈಲು ಸಂಪರ್ಕವನ್ನು ಬಲಪಡಿಸುವುದು ಕಾಲದ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಮಂಗಳೂರು ಕೇಂದ್ರೀಕರಿಸಿ ಕಲ್ಯಾಣ ಕರ್ನಾಟಕ, ಹೈದರಾಬಾದ್ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೆಚ್ಚಿನ ರೈಲು ಸೇವೆಗಳನ್ನು ಆರಂಭಿಸಿ, ಕರ್ನಾಟಕದೊಳಗಿನ ರೈಲು ಸಂಪರ್ಕವನ್ನು ಬಲಪಡಿಸಬೇಕು ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.