ಗುತ್ತಿಗೆದಾರ ಡೇವಿಡ್ ಶೂಟೌಟ್: ಮೂವರ ಬಂಧನ

ಗುತ್ತಿಗೆದಾರ ಡೇವಿಡ್ ಶೂಟೌಟ್: ಮೂವರ ಬಂಧನ

ಶಿರ್ವ: ಕಾಪು ತಾಲೂಕಿನ ಮುದರಂಗಡಿಯಲ್ಲಿ ಶುಕ್ರವಾರ ನಡೆದ ಗುತ್ತಿಗೆದಾರ ಡೇವಿಡ್ ಡಿ’ಸೋಜಾ ಶೂಟೌಟ್ ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಡೇವಿಡ್ ಡಿ’ಸೋಜಾ ತನ್ನ ಪ್ರಿನ್ಸ್ ಎಂಟರ್‌ಪ್ರೈಸಸ್ ಕಚೇರಿಯಿಂದ ವಾಪಾಸಾಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಅಪರಿತರ ಪೈಕಿ ಒಬ್ಬಾತ ಪಿಸ್ತೂಲ್ ನಿಂದವಡೇವಿಡ್ ಡಿ’ಸೋಜಾ ತಲೆಗೆ ಗುಂಡು ಹಾರಿಸಿದ್ದು, ತೀವ್ರ ಗಾಯಗೊಂಡ ಡೇವಿಡ್ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿತಾದರೂ ದಾರಿಮಧ್ಯೆ ಅವರು ಅಸುನೀಗಿದ್ದರು. ಶೂಟೌಟ್ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಶಿರ್ವ ಪೊಲೀಸರು ತನಿಖೆ ನಡೆಸುತ್ತಿರುವ ಸಂದರ್ಭ ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡ 3 ಮಂದಿ ಆರೋಪಿಗಳು ಬಸ್ಸಿನಲ್ಲಿ ಭಟ್ಕಳ ಕಡೆಗೆ ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅವರ ಪ್ರಯಾಣಿಸುತ್ತಿದ್ದ ಬಸ್ಸನ್ನು ಬೈಂದೂರಿನ ಒತ್ತಿನಾಣೆ ಎಂಬಲ್ಲಿ ತಡೆದು ನಿಲ್ಲಿಸಿ ತಪಾಸಣೆ ಸಂದರ್ಭದಲ್ಲಿ ಬಸ್ಸಿನಲಿದ್ದ ಮೂವರು ಆರೋಪಿಗಳು ಬಸ್ಸಿನಿಂದ ಇಳಿದು ಓಡಿಹೋಗುತ್ತಿದ್ದಾಗ ಅವರನ್ನು ಬೆನ್ನಟ್ಟು ಸಮಯದಲ್ಲಿ ಆರೋಪಿಗಳ ಪೈಕಿ ಉತ್ತರ ಪ್ರದೇಶದ ಥಾಣಾ ಫಿಲ್ವದ ರಾಜು (42) ಎಂಬಾತ ಕಾಪು ಪೊಲೀಸ್ ಠಾಣೆ ಪಿಎಸ್‌ಐ ತೇಜಸ್ವಿ ಅವರನ್ನು ದೂಡಿ ಹಾಕಿ, ತನ್ನ ಕೈಯ್ಯಲ್ಲಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿ ಓಡಿ ಹೋಗುವಾಗ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹೊಡೆದು ಆತನನ್ನು ಮತ್ತು ಆತನ ವಶದಲ್ಲಿದ್ದ ಪಿಸ್ತೂಲನ್ನು ವಶಕ್ಕೆ ಪಡೆದುಕೊಂಡಿದ್ದು, ಆತ ಡೇವಿಡ್ ಡಿ’ಸೋಜಾ ಅವರಿಗೆ ತನ್ನ ಪಿಸ್ತೂಲಿನಿಂದ ಗುಂಡು ಹಾರಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಆತ ಪೊಲೀಸರಿಗೆ ಗುಂಡು ಹಾರಿಸಿ ಗಾಯಗೊಳಿಸಿದ ಬಗ್ಗೆ  ಕೊಲೆ ಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಅತನ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇನ್ನಿಬ್ಬರು ಪರಾರಿಯಾದ ಆರೋಪಿಗಳಾದ ಉತ್ತರಾಖಂಡದ ಅಜಯ್ ರಸ್ತೋಗಿ ಯಾನೆ ಅನ್ಮೋಲ್ (23)ನನ್ನು ಕುಮಟಾದಲ್ಲಿ ಮತ್ತು ಬಿಹಾರಸ ಜಿಯಾಹುಲ್ ವಜೂಲ್ ಶೇಖ್ ಯಾನೆ ದೀಪಕ್ (38)ನನ್ನು ಭಟ್ಕಳದಲ್ಲಿ ಶನಿವಾರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ವಶಕ್ಕೆ ಪಡೆಯುವ ವೇಳೆ ಗುಂಡು ತಗುಲಿ ಗಾಯಗೊಂಡಿರುವ ಕಾಪು ಪೊಲೀಸ್ ಠಾಣಾ ಪಿಎಸ್‌ಐ. ತೇಜಸ್ವಿ ಅವರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ಆರೋಪಿ ರಾಜು ಕೂಡಾ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆರೋಪಿಗಳು ಕೃತ್ಯಕ್ಕೆ ಬಳಸಿ ಬಿಟ್ಟುಹೋಗಿದ್ದ ಮೋಟಾರ್ ಬೈಕನ್ನು ಎರ್ಮಾಳ್ ನಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ.

ಡೇವಿಡ್ ಡಿ’ಸೋಜಾ ನಡೆಸುತ್ತಿದ್ದ ಕಾಮಗಾರಿಗೆ ಸಂಬಂಧಿಸಿದಂತೆ ಅನ್ಯ ರಾಜ್ಯದ ಕಂಪೆನಿಯೊಂದಿಗೆ ಹಣಕಾಸಿನ ವಿಚಾರದಲ್ಲಿ ಉಂಟಾಗಿರುವ ವೈಮನಸ್ಸಿನಿಂದಾಗಿ ಡೇವಿಡ್ ಕೊಲೆಗೆ ಸುಫಾರಿ ನೀಡಿದ್ದು ಕೃತ್ಯಕ್ಕೆ ಸಹಕರಿಸಿದ, ಹಣಕಾಸಿನ ನೆರವು ನೀಡಿದ ಮತ್ತು ಆರೋಪಿಗಳಿಗೆ ಆಶ್ರಯ ನೀಡಿದವರನ್ನು ಪತ್ತೆಮಾಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಎಸ್.ಪಿ. ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ನೇತೃತ್ವದಲ್ಲಿ ಕಾಪು ವೃತ್ತ ನಿರೀಕ್ಷಕ ಅಝ್‌ಮತ್ ಆಲಿ ಜಿ, ಡಿ.ಎಸ್.ಬಿ. ವಿಭಾಗದ ಪಿ.ಐ. ಹರೀಶ್, ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್, ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಬೈಂದೂರು ಪಿಎಸ್‌ಐ ಮಹೇಶ್, ಕಾಪು ಪಿಎಸ್‌ಐ ತೇಜಸ್ವಿ, ಶಿರ್ವ ಪಿಎಸ್‌ಐ ಮಂಜುನಾಥ ಮರಬದ, ಕೊಲ್ಲೂರು ಪಿಎಸ್‌ಐ ವಿನಯ್, ಕಾರ್ಕಳ ಗ್ರಾಮಾಂತರ ಪಿಎಸ್‌ಐ ಪ್ರಸನ್ನ ಎಂ.ಎಸ್., ಪಡುಬಿದ್ರಿ ಪಿಎಸ್‌ಐ. ಶಕ್ತಿವೇಲು ಹಾಗೂ ಅನಿಲ್, ಶಿರ್ವ ಪಿಎಸ್‌ಐವಲೋಹಿತ್ ಕುಮಾರ್, ಪ್ರೊಬೆಷನರಿ ಪಿ.ಎಸ್‌ಐ ಶಿಫಾಝ್ ಹಾಗೂ ಸಿಬ್ಬಂದಿಗಳ ತಂಡ, ಭಟ್ಕಳ ಹಾಗೂ ಕುಮಟಾ ಪೊಲೀಸರು, ಜಿಲ್ಲಾ ಅಪರಾಧ ಪರಿಶೀಲನಾಧಿಕಾರಿ, ಬೆರಳಚ್ಚು, ಶ್ವಾನದಳ ಹಾಗೂ ಸಿ.ಡಿ.ಆರ್. ಸೆಲ್ ಉಡುಪಿ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಘಟನೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಸರ್ವತ್ರ ಪ್ರಶಂಸೆ ವ್ಯಕ್ತವಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article