ಶಿರ್ವ-ಕುತ್ಯಾರು ಪರಿಸರದಲ್ಲಿ ಹುಚ್ಚುನಾಯಿ ಕಾಟ: ಹಲವರಿಗೆ ಕಡಿತ, ಆಸ್ಪತ್ರೆ ದಾಖಲು
ಶಿರ್ವ: ಕಾಪು ತಾಲೂಕು ವ್ಯಾಪ್ತಿಯ ಶಿರ್ವ ಮತ್ತು ಕುತ್ಯಾರು ಗ್ರಾ.ಪಂ. ಪರಿಸರದಲ್ಲಿ ಬುಧವಾರ ಹಲವರಿಗೆ ಹುಚ್ಚುನಾಯಿ ಕಡಿತಗೊಂಡ ವರದಿಯಾಗಿದೆ. ನಾಲ್ಕು ಮಂದಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಗು ಮತ್ತು ಗಂಭೀರ ಗಾಯಗೊಂಡ ಒಬ್ಬರು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿರ್ವ ಪೇಟೆಯ ಪೆಟ್ರೋಲ್ ಬಂಕ್ ಬಳಿ ಓರ್ವ ಬ್ಯಾಂಕ್ ಅಧಿಕಾರಿಗೆ ಹುಚ್ಚುನಾಯಿ ಕಚ್ಚಿದ್ದು ಆ ಪರಿಸರದಲ್ಲೇ ಇನ್ನೋರ್ವ ಬೈಕ್ ಸವಾರನಿಗೂ ನಾಯಿ ಕಚ್ಚಿದ ವರದಿಯಾಗಿದೆ. ಶಿರ್ವ ಕೊಲ್ಲಬೆಟ್ಟು ಜೀವನ್ ಆಶಾ ಟ್ರಸ್ಟ್ ಬಳಿ ಕೊಲ್ಲಬೆಟ್ಟುವಿನ ಫಿಲಿಪ್ ಎಂಬವರಿಗೆ ನಾಯಿ ಕಚ್ಚಿದ್ದು, ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಲ್ಲಬೆಟ್ಟು ಪರಿಸರದ ಹೆಚ್ಚಿನ ನಾಯಿಗಳಿಗೂ ಹುಚ್ಚುನಾಯಿ ಕಡಿದಿದೆ ಎನ್ನಲಾಗಿದೆ.
ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂದ್ರಪುರ ತುರೆಹಿತ್ಲು ಎಂಬಲ್ಲಿ ಪೂವಣಿ ಪೂಜಾರಿ ಎಂಬವರಿಗೂ ನಾಯಿ ಕಡಿದು ಗಂಭೀರ ಗಾಯವಾಗಿದ್ದು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿರ್ವ ಪರಿಸರದಲ್ಲಿ ಭಯಭೀತ ವಾತಾವರಣ:
ಶಿರ್ವದ ಶಿಕ್ಷಣ ಸಂಸ್ಥೆಗಳಿಗೆ ಕುತ್ಯಾರು, ಶಿರ್ವ ಪರಿಸರದ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಶಾಲೆಗಳಿಗೆ ಬರುತ್ತಿದ್ದು, ಹುಚ್ಚುನಾಯಿ ಹಾವಳಿಯಿಂದ ವಿದ್ಯಾರ್ಥಿಗಳ ಪೋಷಕರು ಭಯಭೀತರಾಗಿದ್ದಾರೆ. ಇನ್ನೊಂದೆಡೆ ಬೀದಿ ನಾಯಿಗಳ ಕಾಟವೂ ಅಧಿಕವಾಗಿದೆ..! ಸ್ಥಳೀಯಾಡಳಿತ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ..!
ಶಿರ್ವ ಆರೋಗ್ಯಾಧಿಕಾರಿಯಿಂದ ಎರಡೂ ಗ್ರಾ.ಪಂ. ಅಧಿಕಾರಿಗಳಿಗೆ ಪತ್ರ:
ಶಿರ್ವ ಮತ್ತು ಕುತ್ಯಾರು ಪರಿಸರದಲ್ಲಿ ಹುಚ್ಚುನಾಯಿ ಹಾವಳಿ ಇದ್ದು, ಈಗಾಗಲೇ 5 ವರ್ಷದ ಮಗು ಸೇರಿದಂತೆ ಐವರು ನಾಯಿ ಕಡಿತಕ್ಕೆ ಒಳಗಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗಾಯತ್ರಿ ಇವರು ಶಿರ್ವ ಹಾಗೂ ಕುತ್ಯಾರು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಎರಡೂ ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕರಿಗೆ ಮಾಹಿತಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.