ನಾಗರ ಪಂಚಮಿಯ ಮುನ್ನ ದಿನ ಕುಕ್ಕೆಯಲ್ಲಿ ಜನಸಾಗರ
Sunday, August 16, 2026
ಸುಬ್ರಹ್ಮಣ್ಯ: ದಕ್ಷಿಣ ಭಾರತದ ನಾಗರಾಧನೆಯ ಪ್ರಸಿದ್ಧ ಹಾಗೂ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರ ನಾಗರ ಪಂಚಮಿ ಇದ್ದು ಮುನ್ನ ದಿನವಾದ ಭಾನುವಾರ ಅಪಾರ ಸಂಖ್ಯೆಯ ಭಕ್ತಾದಿಗಳು ರಾಜ್ಯ ಹೊರ ರಾಜ್ಯಗಳಿಂದ ಆಗಮಿಸಿದ್ದಾರೆ.
ಶ್ರೀ ದೇವಳದ ಒಳಾಂಗಣ ಹೊರಾಂಗಣ ಆಗಮನ ಹಾಗೂ ನಿರ್ಗಮನ ಸ್ಥಳಗಳೆಲ್ಲವೂ ಭಕ್ತಾದಿಗಳಿಂದ ತುಂಬಿ ತುಳುಕುತ್ತಿದೆ. ಭಕ್ತಾದಿಗಳು ರಥಭೇದಿಯಿಂದಲೇ ಗುಂಪು ಗುಂಪಾಗಿ ದೇವಳದ ಗೋಪುರದ ಮುಂಭಾಗದಿಂದ ಒಳಾಂಗಣ ಪ್ರವೇಶಸುತ್ತಿದ್ದಾರೆ. ಮಳೆಯ ಸ್ವಲ್ಪ ವಿರಾಮದ ಕಾರಣ ಭಕ್ತಾದಿಗಳು, ರಥಬೀದಿಯಲ್ಲಿ ಜಮಾಯಿಸಿರುತ್ತಾರೆ.
ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಸ್ವಾತಂತ್ರ್ಯ ದಿನದ ಸರಕಾರಿ ರಜೆ ಹಾಗೂ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡು ಶನಿವಾರ ಸಂಜೆಯಿಂದಲೇ ಅಧಿಕ ಸಂಖ್ಯೆಯಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಿರುತ್ತಾರೆ. ಶ್ರೀ ದೇವಳದ ವಸತಿ ಗ್ರಹಗಳು ಹಾಗೂ ಖಾಸಗಿ ವಸತಿ ಗ್ರಹಗಳೆಲ್ಲವೂ ಶನಿವಾರವೇ ಭರ್ತಿಯಾಗಿದ್ದವು. ಭಾನುವಾರ ಬೆಳಗ್ಗೆಯಿಂದಲೇ ಭಕ್ತಾದಿಗಳ ವಾಹನಗಳು ಸಾಲು ಸಾಲಾಗಿ ಕುಮಾರಧಾರ ಸ್ಥಾನಗಟ್ಟದಿಂದ ದೇವಳದವರೆಗೆ ಬರುತ್ತಿದ್ದು ಪಾರ್ಕಿಂಗ್ ಪ್ರದೇಶಗಳೆಲ್ಲವೂ ವಾಹನಗಳಿಂದ ಬರ್ತಿಯಾಗಿದ್ದವೆ.
ಇತ್ತ ಶ್ರೀ ದೇವಳದ ದರ್ಶನದ ಸಾಲು, ತೀರ್ಥಪ್ರಸಾದ ವಿತರಣೆ, ಪ್ರಸಾದ ಕೌಂಟರ್ ಹಾಗೂ ಬೋಜನ ಶಾಲೆಗಳಲ್ಲಿ ಭಕ್ತಾದಿಗಳ ಸರಳತೆಯ ಸಾಲು ಅಧಿಕವಾಗಿತ್ತು. ಶ್ರೀ ದೇವಳದ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಸೆಕ್ಯೂರಿಟಿ ಅವರು ಹೋಂ ಗಾರ್ಡ್ ಹಾಗೂ ಪೊಲೀಸನವರು ಬಂದೋಬಸ್ತ್ ಮಾಡಿ ಸುಗಮ ದರ್ಶನ, ಪ್ರಸಾದ ಹಾಗೂ ಬೋಜನ ಪ್ರಸಾದಕ್ಕೆ ಅನುವು ಮಾಡಿಕೊಟ್ಟಿದ್ದರು.


