ಬಿಲದ್ವಾರ ಜಂಕ್ಷನ್ನಲ್ಲಿ ಅಪಘಾತದ ಆತಂಕ
ಈ ಜಂಕ್ಷನ್ನಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ ಎನ್ನಲಾಗಿದ್ದು, ಸುಬ್ರಹ್ಮಣ್ಯ ಕಡೆಯಿಂದ ಬರುವ ಕೆಲವು ವಾಹನಗಳು ವೇಗವನ್ನು ಕಡಿಮೆ ಮಾಡದೆ ಹಾಗೂ ಸೂಕ್ತ ಸೂಚನೆ ನೀಡದೆ ಬಲಕ್ಕೆ ತಿರುಗುವುದರಿಂದ ಅಪಾಯದ ಸಾಧ್ಯತೆ ಹೆಚ್ಚುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮುಖ್ಯ ರಸ್ತೆಯಲ್ಲಿ ವೇಗವಾಗಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ವಿದ್ಯಾನಗರ ಸಂಪರ್ಕಿಸುವ ರಸ್ತೆಯ ತಿರುವಿನ ಬಗ್ಗೆ ಅರಿವಿನ ಕೊರತೆಯೂ ಅಪಘಾತಕ್ಕೆ ಕಾರಣವಾಗುತ್ತಿದೆ ಎನ್ನಲಾಗಿದೆ.
ಇದಲ್ಲದೆ, ಈ ರಸ್ತೆಯಲ್ಲಿ ಪ್ರತಿದಿನ ಹಲವು ಶಾಲಾ ಮಕ್ಕಳು ಹಾಗೂ ಪಾದಚಾರಿಗಳು ಸಂಚರಿಸುತ್ತಿರುವುದರಿಂದ ಅವರ ಸುರಕ್ಷತೆಯ ಬಗ್ಗೆಯೂ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಅಪಾಯದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್ ಅಳವಡಿಸಲಾಗಿದ್ದರೂ, ಶಾಶ್ವತ ಪರಿಹಾರದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಜಂಕ್ಷನ್ನ ಅಪಾಯಕಾರಿ ತಿರುವುಗಳಲ್ಲಿ ಶಾಶ್ವತ ಹಂಪ್ಸ್, ಎಚ್ಚರಿಕೆ ಫಲಕ ಹಾಗೂ ಅಗತ್ಯ ರಸ್ತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿ ವಾಹನಗಳ ವೇಗ ನಿಯಂತ್ರಿಸಬೇಕು. ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಈ ನಡುವೆ, ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಸಮಾಜ ಸೇವಕ ಡಾ. ರವಿ ಕಕ್ಕೇಪದವು ಅವರು ಜಂಕ್ಷನ್ನಲ್ಲಿ ರಸ್ತೆಗೆ ಬಿದ್ದಿದ್ದ ಮರಳು ಮಿಶ್ರಿತ ಮಣ್ಣನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.