ಸುಬ್ರಹ್ಮಣ್ಯದಲ್ಲಿ ಧಾರಾಕಾರ ಮಳೆ: ನದಿಗಳ ನೀರಿನ ಮಟ್ಟ ಏರಿಕೆ, ಹಲವೆಡೆ ಭೂಕುಸಿತ
ಸುಬ್ರಹ್ಮಣ್ಯ-ಸುಳ್ಯ ರಸ್ತೆಯ ಮಲಿಯಾಳ ಎಂಬಲ್ಲಿ ರಸ್ತೆ ಬದಿಯಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದ ಗುಡ್ಡ ಕುಸಿತ ಸಂಭವಿಸಿದೆ. ಮಳೆ ಇದೇ ರೀತಿ ಮುಂದುವರಿದರೆ ಮತ್ತಷ್ಟು ಗುಡ್ಡ ಕುಸಿದು ವಾಹನ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಸುಬ್ರಹ್ಮಣ್ಯದ ದೇವರಗದ್ದೆ ರಸ್ತೆಯಲ್ಲೂ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.
ಬಿಸಿಲೆಘಾಟ್ ಮಾರ್ಗದಲ್ಲಿ ಗಾಳಿ-ಮಳೆಗೆ ಮರಗಳು ಧರೆಗುರುಳಿದ್ದು, ರಸ್ತೆ ಮೇಲೆ ಮರ ಬಿದ್ದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದೆ. ದಾರಿ ಮಧ್ಯೆ ಸಿಲುಕಿರುವ ಪ್ರವಾಸಿಗರು ಪರದಾಡುವಂತಾಗಿದೆ. ಮಧ್ಯಾಹ್ನದಿಂದ ಸಾರಿಗೆ ಬಸ್‌ಗಳು ಸೇರಿದಂತೆ ಹಲವು ವಾಹನಗಳು ನಿಂತಲ್ಲೇ ನಿಂತಿದ್ದು, ಪ್ರಯಾಣಿಕರು ಹೈರಾಣಾಗಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದ ಬಹುತೇಕ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಇದ್ದರೂ ಮಳೆ ನೀರು ರಸ್ತೆಯಲ್ಲೇ ಹರಿದು ಹೋಗುತ್ತಿರುವುದಕ್ಕೆ ಸಾರ್ವಜನಿಕರು ಹಾಗೂ ಪಾದಚಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಶಿಕಟ್ಟೆಯಿಂದ ಆದಿಸುಬ್ರಹ್ಮಣ್ಯಕ್ಕೆ ತೆರಳುವ ರಸ್ತೆಯ ನೂಚಿಲ ಎಂಬಲ್ಲಿ ರಸ್ತೆಯಲ್ಲಿ ನೀರು ಹರಿದು ಪ್ರಸನ್ನ ಭಟ್ ಹಾಗೂ ಶೇಖರ್ ಭಟ್ ಅವರ ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ.
ಏನೆಕಲ್ಲಿನ ಬೂದಿಪಲ್ಲ-ಮಧುವನ-ದೇವರಹಳ್ಳಿ ರಸ್ತೆಯ ಮಧ್ಯೆ ಭೂಕುಸಿತ ಸಂಭವಿಸಿ ರಸ್ತೆ ಸಂಪೂರ್ಣ ಕುಸಿದ ಪರಿಣಾಮ ಸಂಪರ್ಕ ಕಡಿತಗೊಂಡಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೋನಪ್ಪ ಹಾಗೂ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಸದಸ್ಯ ಮೋಹನ ಕೋಟಿ ಗೌಡನ ಮನೆ, ದಿಲೀಪ್ ಉಪ್ಪಳಿಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ನಿರಂತರ ಮಳೆ ಹಾಗೂ ಹಲವೆಡೆ ಭೂಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಅನಾಹುತ ಸಂಭವಿಸುವ ಆತಂಕ ಎದುರಾಗಿದ್ದು, ಸಂಬಂಧಪಟ್ಟ ಇಲಾಖೆಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಹಾಗೂ ಕುಲ್ಕುಂದ ಬಳಿ ಅರಣ್ಯ ಇಲಾಖೆ ವತಿಯಿಂದ ಆನೆ ಕಂದಕ ನಿರ್ಮಿಸಿದ್ದು ಮಳೆಗಾಲದಲ್ಲಿ ನೀರು ಸ್ಥಳೀಯ ನಿವಾಸಿಗಳ ಮನೆಗಳಿಗೆ ನೀರು ನುಗ್ಗಿ ಸ್ಥಳೀಯರಲ್ಲಿಆತಂಕಎದುರಾಗಿದೆ.




