ದೇವರಗುಂಡ ಭಾಗದಲ್ಲಿ ತೀವ್ರಗೊಂಡ ಕಾಡಾನೆ ದಾಳಿ: ವ್ಯಾಪಕ ಕೃಷಿ ಹಾನಿ
Tuesday, August 18, 2026
ಸುಳ್ಯ: ಕರ್ನಾಟಕ-ಕೇರಳ ಗಡಿ ಪ್ರದೇಶವಾದ ಮಂಡೆಕೋಲು ಗ್ರಾಮದ ದೇವರಗುಂಡ ಭಾಗದಲ್ಲಿ ಕಾಡಾನೆಗಳ ಹಿಂಡು ದಾಳಿ ಮಾಡಿ ವ್ಯಾಪಕ ಕೃಷಿ ಹಾನಿ ಮಾಡಿದೆ.
ಸೋಮವಾರ ರಾತ್ರಿ ಕೃಷಿ ತೋಟಕ್ಕೆ ಲಗ್ಗೆಯಿಟ್ಟಿರುವ ಆನೆಗಳ ಹಿಂಡು ತೆಂಗು, ಅಡಿಕೆ, ಬಾಳೆ ಸೇರಿ ಅಪಾರ ಕೃಷಿಯನ್ನು ನಾಶಪಡಿಸಿದೆ. ತೋಟದಲ್ಲಿರುವ, ಪೈಪ್, ಡ್ರಮ್‌ಗಳನ್ನೂ ಪುಡಿಗಟ್ಟಿದೆ. ದೇವರಗುಂಡ, ಬೊಟ್ಟುಕಲ್ಲು ಭಾಗದಲ್ಲಿ ಆನೆಗಳ ಹಿಂಡು ವ್ಯಾಪಕ ಹಾನಿ ಮಾಡಿದೆ. ಅರಣ್ಯ ಭಾಗದಿಂದ ಪಯಸ್ವಿನಿ ನದಿ ದಾಟಿ ದೇವರಗುಂಡ ಭಾಗಕ್ಕೆ ದಾಳಿಯಿಡುವ ಗಜಪಡೆಗಳು ಈ ಭಾಗದಲ್ಲಿ ವ್ಯಾಪಕ ಕೃಷಿ ಹಾನಿ ಮಾಡಿದೆ.
ಆನೆಗಳ ದಾಳಿ ತಡೆಯಲು ಪರಪ್ಪೆ ತೂಗುಸೇತುವೆ ಬಳಿಯಿಂದ ಪಂಜಿಕಲ್ಲು ತನಕ ಸೋಲಾರ್ ಬೇಲಿ ನಿರ್ಮಿಸಬೇಕು ಎಂಬ ಬೇಡಿಕೆಯನ್ನು ಈ ಭಾಗದ ಕೃಷಿಕರು ಸರಕಾರದ ಮುಂದಿರಿಸಿದೆ. ಕಳೆದ ಅನೇಕ ವರ್ಷಗಳಿಂದ ಈ ಭಾಗದಲ್ಲಿ ಕಾಡಾನೆಗಳ ಹಿಂಡು ನಿರಂತರ ದಾಳಿ ಮಾಡಿ ಕೃಷಿ ಹಾನಿ ಮಾಡುತಿವೆ. ಆನೆಗಳು ಹಿಂಡಾಗಿ ಮತ್ತು ಒಂಟಿ ಆನೆಯು ದಾಳಿ ನಡೆಸುತ್ತದೆ.