ಉಜಿರೆ ಎಸ್‌ಡಿಎಂ ನ್ಯಾಚುರೋಪತಿ ಕಾಲೇಜು ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಅವರಿಗೆ ಅಭಿನಂದನಾ ಸಮಾರಂಭ
ಎಸ್‌ಡಿಎಂ ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ಪ್ರಶಾಂತ್ ಶೆಟ್ಟಿ ಅವರ ಕಾರ್ಯಕ್ಷಮತೆ ಮತ್ತು ಸೇವಾ ಮನೋಭಾವವನ್ನು ಪ್ರಶಂಸಿಸಿ, ನಿರ್ದೇಶಕರಾಗಿ ಅವರ ಹೊಸ ಜವಾಬ್ದಾರಿಯಲ್ಲಿ ಮತ್ತಷ್ಟು ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಡಾ. ಪ್ರಶಾಂತ್ ಶೆಟ್ಟಿ ಅವರ ಸಂಸ್ಥೆಯೊಂದಿಗಿನ ಸುದೀರ್ಘ ಸೇವೆಯನ್ನು ಸ್ಮರಿಸಿ ಅವರು ವೈದ್ಯಾಧಿಕಾರಿಯಾಗಿ ಸೇವೆ ಆರಂಭಿಸಿ, ಸಹಾಯಕ ಪ್ರಾಧ್ಯಾಪಕರಾಗಿ ನಂತರ ಸುಮಾರು 18 ವರ್ಷಗಳ ಕಾಲ ಪ್ರಾಂಶುಪಾಲರಾಗಿ, ಸಂಸ್ಥೆಯ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಸಮರ್ಪಣಾಭಾವ, ನಾಯಕತ್ವ ಮತ್ತು ಶಿಕ್ಷಣ ಕ್ಷೇತ್ರದ ಸೇವೆಯನ್ನು ಗಣ್ಯರು ಶ್ಲಾಘಿಸಿದರು.
ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಉಜಿರೆ ಎಸ್‌ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಜನಾರ್ದನ ಅವರು ಅನುಭವಗಳನ್ನು ಹಂಚಿಕೊಂಡು, ಡಾ. ಪ್ರಶಾಂತ್ ಶೆಟ್ಟಿ ಅವರ ವೃತ್ತಿಪರ ಬದ್ಧತೆ, ಹಾಗೂ ಸಂಸ್ಥೆಯ ಪ್ರಗತಿಗೆ ನೀಡಿದ ಕೊಡುಗೆಯನ್ನು ಮೆಚ್ಚಿಕೊಂಡರು.
ಡಾ. ಬಾಲಕೃಷ್ಣ ಶೆಟ್ಟಿ ಸನ್ಮಾನ ಪತ್ರ ವಾಚಿಸಿ, ಡಾ. ಗೀತಾ ಬಿ. ಶೆಟ್ಟಿ ವಂದಿಸಿದರು.
ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಡಾ. ಪ್ರಶಾಂತ್ ಶೆಟ್ಟಿ ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು. ಅವರ ಮುಂದಿನ ಜವಾಬ್ದಾರಿಯು ಎಸ್‌ಡಿಎಂ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಸಂಸ್ಥೆಗಳ ಹೆಚ್ಚಿನ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಿದೆ ಎಂಬ ಆಶಯ ವ್ಯಕ್ತವಾಯಿತು.