ಸಣ್ಣ ಸಣ್ಣ ಸತ್ಕಾರ್ಯಗಳನ್ನು ಮಾಡಿದರೂ ಸಾರ್ಥಕ ಜೀವನ ನಡೆಸಲು ಸಾಧ್ಯ: ದೀಪಾ ಹಿರೇಗುತ್ತಿ

ಸಣ್ಣ ಸಣ್ಣ ಸತ್ಕಾರ್ಯಗಳನ್ನು ಮಾಡಿದರೂ ಸಾರ್ಥಕ ಜೀವನ ನಡೆಸಲು ಸಾಧ್ಯ: ದೀಪಾ ಹಿರೇಗುತ್ತಿ


ಉಜಿರೆ: ಅಹಂ ಮತ್ತು ಕೀಳರಿಮೆ ತೊರೆದು ಇತರರಲ್ಲಿರುವ ಒಳ್ಳೆಯ ಗುಣಗಳನ್ನು ಗುರುತಿಸಿ ಗೌರವಿಸಬೇಕು. ಸಣ್ಣ ಸಣ್ಣ ಸತ್ಕಾರ್ಯಗಳನ್ನು ಮಾಡಿದರೂ ಸಾರ್ಥಕ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಹಾಗೂ ಅಂಕಣ ಬರಹಗಾರ್ತಿ ದೀಪಾ ಹಿರೇಗುತ್ತಿ ಹೇಳಿದರು.


ಅವರು ಶನಿವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಶಾಂತಿವನ ಟ್ರಸ್ಟ್ ವತಿಯಿಂದ ಪ್ರಕಟಿಸಲಾದ ‘ಜ್ಞಾನ ಚಂದನ’ ಮತ್ತು ‘ಜ್ಞಾನ ನಂದನ’ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.


ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವುದು ಭಾರತದ ಸೌಂದರ್ಯ ಆಗಿದೆ. ಬದುಕಿನಲ್ಲಿ ಬರುವ ನೋವು, ಸಂಕಟ, ದುಖಃ-ದುಮ್ಮಾನಗಳು ಹಾಗೂ ದೈಹಿಕ ಮತ್ತು ಮಾನಸಿಕ ಆಘಾತಗಳನ್ನು ಸಾಧನೆಗೆ ಕಚ್ಛಾವಸ್ತುಗಳನ್ನಾಗಿ ಬಳಸಿ ಉನ್ನತ ಸೇವೆ-ಸಾಧನೆ ಮಾಡಬಹುದು. ಪುಸ್ತಕ ಓದುವುದರಿಂದ ನಮ್ಮ ಕಲ್ಪನೆಯ ಪರಿಧಿ ವಿಸ್ತಾರವಾಗುತ್ತದೆ. ಚಿಂತನ-ಮಂಥನ ಬೆಳೆಯುತ್ತದೆ. ಪ್ರತಿಯೊಬ್ಬರಲ್ಲಿಯೂ ಸುಪ್ತ ಪ್ರತಿಭೆ, ಬುದ್ಧಿವಂತಿಕೆ, ಕೌಶಲ ಇರುತ್ತದೆ. ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಶಿಕ್ಷಕರು, ರಕ್ಷಕರು ಮತ್ತು ಮಕ್ಕಳ ಸಂಘಟಿತ ಪ್ರಯತ್ನದಿಂದ ಎಲ್ಲರೂ ಓದುವ ಹವ್ಯಾಸ ಬೆಳೆಸಿಕೊಳ್ಳಬಹುದು. ಆದರೆ, ಇಂದು ಕಂಪ್ಯೂಟರ್, ಮೊಬೈಲ್ ಫೋನ್ ಬಳಕೆ ಹಾಗೂ ಸಾಮಾಜಿಕ ಜಾಲತಾಣಗಳ ಮೋಹದ ಜಾಲದ ಪ್ರಭಾವದಿಂದ ಎಲ್ಲರೂ ಭಾವನಾರಹಿತವಾಗಿ, ಮಾನವೀಯತೆ ಕಳೆದುಕೊಂಡು ಯಂತ್ರಮಾನವರಾಗುತ್ತಿರುವುದು ಖೇದಕರವಾಗಿದೆ ಎಂದರು.


ನೈತಿಕ ಮೌಲ್ಯಗಳನ್ನು ಉದ್ದೀಪನಗೊಳಿಸುವ ಲಕ್ಷಾಂತರ ಪುಸ್ತಕಗಳನ್ನು ಪ್ರತಿವರ್ಷ ಪ್ರಕಟಿಸಿ, ಶಾಲೆಗಳಲ್ಲಿ ವಿತರಿಸಿ, ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ ಡಿ. ವೀರೇಂದ್ರ ಹೆಗ್ಗಡೆಯವರ ಸೇವೆ ಶ್ಲಾಘನೀಯವಾಗಿದೆ ಎಂದು ಹೇಳಿ ಅಭಿನಂದಿಸಿದರು.


ಅಂಚೆ-ಕುಂಚ ಸ್ಪರ್ಧೆಗಳ ವಿಜೇತರಿಗೆ ಪುರಸ್ಕಾರ ವಿತರಿಸಿದ ಚಲನಚಿತ್ರ ನಟ ಅಭಿಜಿತ್ ಮಾತನಾಡಿ, ಪುಸ್ತಕಗಳನ್ನು ಓದಿ ವಿದ್ಯೆ ಮತ್ತು ಬುದ್ಧಿಯನ್ನು ಬೆಳೆಸಿಕೊಂಡಾಗ ನಾವು ವಿವೇಕವುಳ್ಳ ಆದರ್ಶ ವ್ಯಕ್ತಿಗಳಾಗಿ ಉತ್ತಮ ಸಾಧನೆ ಮಾಡಬಹುದು. ಜಗತ್ತಿನಲ್ಲಿ ಒಳ್ಳೆದು, ಕೆಟ್ಟದು ಎರಡೂ ಇರುತ್ತವೆ. ನಮ್ಮ ಮನಸ್ಸಿನ ನಿಯಂತ್ರಣದೊಂದಿಗೆ ಹಂಸಕ್ಷೀರ ನ್ಯಾಯದಂತೆ ಒಳ್ಳೆಯದನ್ನು ಮಾತ್ರ ಸ್ವೀಕರಿಸಿ ಕೆಟ್ಟದ್ದನ್ನು ಕಡೆಗಣಿಸಬೇಕು ಎಂದು ಅವರು ಸಲಹೆ ನೀಡಿದರು.


ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಸುಪ್ತ ಪ್ರತಿಭೆ ಇದ್ದು, ಗುರು-ಹಿರಿಯರ ಮಾರ್ಗದರ್ಶನದಲ್ಲಿ ಶಿಕ್ಷಣದ ಮೂಲಕ ಆದರ್ಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಪುಸ್ತಕ ಓದುವ ಹವ್ಯಾಸ, ಚಿತ್ರಕಲೆ, ಪ್ರಕೃತಿ-ಪರಿಸರ ವೀಕ್ಷಣೆ ಮೊದಲಾದ ಹವ್ಯಾಸಗಳನ್ನು ಬೆಳೆಸಿಕೊಂಡಾಗ ಉನ್ನತ ಸಾಧನೆ ಮಾಡಬಹುದು ಎಂದು ಹೇಳಿದರು.


ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಬೆಂಗಳೂರಿನಲ್ಲಿರುವ ಕ್ಷೇಮವನದ ಸಿ.ಇ.ಒ. ಶ್ರದ್ಧಾಅಮಿತ್, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಜಗನ್ನಾಥ್ ಮತ್ತು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ ಉಪಸ್ಥಿತರಿದ್ದರು.


ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಶಶಿಕಾಂತ ಜೈನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕ ಶೇಖರ್ ಕಡ್ತಲ ವಂದಿಸಿ, ಪುದುವೆಟ್ಟು ಶಾಲಾ ಶಿಕ್ಷಕ ನಿಶಾಂತ್ ಕಾರ್ಯಕ್ರಮ ನಿರ್ವಹಿಸಿದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article