ಬೆಳ್ತಂಗಡಿ ತಾಲೂಕಿನ ಮೂರು ಕಡೆ ಕಾಡಾನೆಗಳ ಹಾವಳಿ

ಬೆಳ್ತಂಗಡಿ ತಾಲೂಕಿನ ಮೂರು ಕಡೆ ಕಾಡಾನೆಗಳ ಹಾವಳಿ

ಉಜಿರೆ: ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಕಾಡಾನೆಗಳ ಸಂಚಾರ ಮುಂದುವರಿದಿದ್ದು, ಭಾನುವಾರ ರಾತ್ರಿ ಮೂರು ಪ್ರತ್ಯೇಕ ಪ್ರದೇಶಗಳಲ್ಲಿ ಕಾಡಾನೆಗಳು ಕಾಣಿಸಿಕೊಂಡಿವೆ. 

ಇದರಿಂದ ಗ್ರಾಮೀಣ ಭಾಗದ ಜನರಲ್ಲಿ ಆತಂಕ ಹೆಚ್ಚಾಗಿದೆ.ಚಾರ್ಮಾಡಿ ಘಾಟಿಯ 9ನೇ ತಿರುವಿನ ಸಮೀಪ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಕಾಡಾನೆಯೊಂದು ರಸ್ತೆ ಬದಿಯಲ್ಲಿ ಕಾಣಿಸಿಕೊಂಡಿದೆ. ಘಾಟಿ ಪ್ರದೇಶದಲ್ಲಿ ಆಗಾಗ್ಗೆ ಕಾಣಿಸಿ ಕೊಳ್ಳುತ್ತಿರುವ ಇದೇ ಕಾಡಾನೆ ಮತ್ತೆ ರಸ್ತೆ ಬದಿಗೆ ಬಂದಿರುವುದು ವಾಹನ ಸವಾರರಲ್ಲಿ ಆತಂಕ ಮೂಡಿಸಿತು. ಕಾಡಾನೆ ರಸ್ತೆ ಬದಿಯಲ್ಲಿ ಕೆಲಕಾಲ ನಿಂತಿದ್ದರಿಂದ ವಾಹನ ಸಂಚಾರಕ್ಕೂ ಅಲ್ಪಕಾಲ ವ್ಯತ್ಯಯ ಉಂಟಾಯಿತು.

ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ತೆರಳಿ ಕಾಡಾನೆಯನ್ನು ಕಾಡಿನತ್ತ ಓಡಿಸುವ ಕಾರ್ಯಾಚರಣೆ ನಡೆಸಿದರು. ಬಳಿಕ ಕಾಡಾನೆ ಘಾಟಿ ಮೂಲಕ ಬಾಂಜಾರುಮಲೆ ಕಡೆಗೆ ತೆರಳುವ ಹಾದಿಯ ಅರಣ್ಯ ಪ್ರದೇಶದ ಒಳಭಾಗಕ್ಕೆ ತೆರಳಿದೆ ಎಂದು ತಿಳಿದುಬಂದಿದೆ. ಈ ಪ್ರದೇಶವು ಘಾಟಿ ರಸ್ತೆಯಿಂದ ಸುಮಾರು 400 ಮೀ. ದೂರದಲ್ಲಿದ್ದು, ಕಾಡಾನೆ ಮತ್ತೆ ರಸ್ತೆ ಕಡೆಗೆ ಬರುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆ ಸಿಬ್ಬಂದಿ ನಿಗಾ ಇರಿಸಿದ್ದಾರೆ.

ತೋಟಕ್ಕೆ ನುಗ್ಗಿದ ಮೂರು ಆನೆಗಳು:

ಮುಂಡಾಜೆ ಗ್ರಾಮದ ಕುಳಂಜಿ ರೋಡಿನ ಪ್ರದೇಶದಲ್ಲಿರುವ ಮಹೇಂದ್ರ ಪರಾಂಜಪೆ ಅವರ ತೋಟಕ್ಕೂ ಭಾನುವಾರ ರಾತ್ರಿ ಮೂರು ಕಾಡಾನೆಗಳು ನುಗ್ಗಿವೆ. ಆನೆಗಳು ತೋಟದಲ್ಲಿ ಸಂಚರಿಸಿ ಹತ್ತಕ್ಕೂ ಅಧಿಕ ಅಡಕೆ ಮರಗಳು, ಬಾಳೆ ಗಿಡಗಳು ಹಾಗೂ ತೆಂಗಿನ ಮರಗಳಿಗೆ ಹಾನಿ ಮಾಡಿವೆ. ತೋಟದಲ್ಲಿದ್ದ ಬೆಳೆಗಳಿಗೆ ಹಾನಿಯಾಗಿರುವುದರಿಂದ ಸಾವಿರಾರು ರೂ. ನಷ್ಟ ಉಂಟಾಗಿದೆ.

ಕಾಡಾನೆಗಳ ಹಿಂಡು ಜನವಸತಿ ಪ್ರದೇಶದ ಸಮೀಪವೇ ಸಂಚರಿಸುತ್ತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ರಾತ್ರಿ ವೇಳೆ ತೋಟಗಳಿಗೆ ತೆರಳದಂತೆ ಹಾಗೂ ಕಾಡಾನೆಗಳ ಚಲನವಲನ ಕಂಡು ಬಂದಲ್ಲಿ ಅರಣ್ಯ ಇಲಾಖೆಗೆ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರು ನಿಗಾ ವಹಿಸಿದ್ದಾರೆ.

ಮಲ್ಲ, ನಂದಿಕಾಡು ಪರಿಸರದಲ್ಲೂ ಒಂಟಿ ಸಲಗ:

ಮಲವಂತಿಗೆ ಗ್ರಾಮದ ಮಲ್ಲ, ನಂದಿಕಾಡು ಪರಿಸರದಲ್ಲೂ ಒಂಟಿ ಸಲಗವೊಂದು ಭಾನುವಾರ ರಾತ್ರಿ ಜನವಸತಿ ಪ್ರದೇಶಗಳ ಸಮೀಪ ಸಂಚರಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ರಾತ್ರಿ ವೇಳೆ ಸಲಗದ ಓಡಾಟ ಕಂಡುಬಂದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ತಾಲೂಕಿನ ಹೆಚ್ಚಿನ ಭಾಗಗಳಲ್ಲಿ ಕಾಡಾನೆಗಳ ಸಂಚಾರ ಪದೇಪದೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಬೇಕು. ಕಾಡಾನೆಗಳು ಜನವಸತಿ ಹಾಗೂ ಕೃಷಿ ಪ್ರದೇಶಗಳಿಗೆ ಪ್ರವೇಶಿಸದಂತೆ ಅಗತ್ಯ ಕ್ರಮ ಕೈಗೊಳ್ಳುವುದರ ಜತೆಗೆ, ಬೆಳೆ ಹಾನಿಗೊಳಗಾದ ರೈತರಿಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article