ಅನಾರೋಗ್ಯದಿಂದ ನೊಂದು ಬಾವಿಗೆ ಹಾರಿ ವೃದ್ಧೆ ಆತ್ಮಹತ್ಯೆ
ವಿಟ್ಲ: ಅಳಿಕೆ ಗ್ರಾಮದ ಪಡಿಬಾಗಿಲು ಎಂಬಲ್ಲಿ ವೃದ್ಧೆಯೊಬ್ಬರು ಮನೆ ಮುಂಭಾಗದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತರನ್ನು ಆಟೋ ಚಾಲಕ ನಾರಾಯಣ ಗೌಡ ಅವರ ತಾಯಿ ಗಿರಿಜಾ ಗೌಡ (78) ಎಂದು ಗುರುತಿಸಲಾಗಿದೆ.
ಕೆಲವು ದಿನಗಳ ಹಿಂದೆ ತೀವ್ರ ಉಸಿರಾಟದ ತೊಂದರೆಯಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ಗಿರಿಜಾ ಅವರನ್ನು ಇಂದು ಸಂಜೆ ಮತ್ತೆ ಆಸ್ಪತ್ರೆಗೆ ದಾಖಲಿಸಲು ಕುಟುಂಬದವರು ಸಿದ್ಧತೆ ನಡೆಸಿದ್ದರು.
ಮಗ ನಾರಾಯಣ ಗೌಡ ಪುತ್ತೂರಿನಲ್ಲಿ ಆಟೋ ಚಾಲಕರಾಗಿದ್ದು, ಸೊಸೆ ಪುಷ್ಪಲತಾ ಅವರು ಮಗುವನ್ನು ಕರೆತರಲು ಪಡಿಬಾಗಿಲು ಅಂಗನವಾಡಿಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ವಾಪಸ್ ಬಂದಾಗ ಮನೆಯಲ್ಲಿ ಅತ್ತೆ ಕಾಣದಿದ್ದಾಗ ಹುಡುಕಾಟ ನಡೆಸಿದ್ದು, ಬಾವಿಯಲ್ಲಿ ಇಣುಕಿ ನೋಡಿದಾಗ ಮೃತದೇಹ ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಅನಾರೋಗ್ಯದ ನೋವಿನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ವಿಟ್ಲ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫ್ರೆಂಡ್ಸ್ ವಿಟ್ಲದ ಮುರಳೀಧರ ನೇತೃತ್ವದ ತಂಡ ಬಾವಿಯಿಂದ ಮೃತದೇಹ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಿದೆ.