ತಣ್ಣೀರುಬಾವಿ–ಕಸಬಾ ಬೆಂಗ್ರೆಗೆ ತಪ್ಪಿದ ಎಲೆಕ್ಟ್ರಿಕ್ ಬಸ್: ಡಿವೈಎಫ್ಐ, ಸಿಪಿಐಎಮ್ ಪ್ರತಿಭಟನೆ

ತಣ್ಣೀರುಬಾವಿ–ಕಸಬಾ ಬೆಂಗ್ರೆಗೆ ತಪ್ಪಿದ ಎಲೆಕ್ಟ್ರಿಕ್ ಬಸ್: ಡಿವೈಎಫ್ಐ, ಸಿಪಿಐಎಮ್ ಪ್ರತಿಭಟನೆ


ಮಂಗಳೂರು: ತಣ್ಣೀರುಬಾವಿ–ಕಸಬಾ ಬೆಂಗ್ರೆ ಪ್ರದೇಶಕ್ಕೆ ಮಂಗಳೂರು ನಗರದಿಂದ ಎರಡು ಕೆ.ಎಸ್.ಆರ್.ಟಿ.ಸಿ. ಸರ್ಕಾರಿ ಬಸ್ ಸೇವೆಗಳನ್ನು ತಕ್ಷಣ ಆರಂಭಿಸಲು ಒತ್ತಾಯಿಸಿ ಹಲವು ಬಾರಿ ಮನವಿ ನೀಡಲಾಗಿತ್ತು 100 ಸರಕಾರಿ ಎಲೆಕ್ಟ್ರಿಕ್ ಬಸ್ ಆರಂಭಿಸಲು ಕೆಎಸ್ಸ್ ಆರ್ ಟಿ ಸಿ ತೀರ್ಮಾನ ಮಾಡಿ ಪಟ್ಟಿ ಸಿದ್ದಪಡಿಸಿದ್ದು ಪಟ್ಟಿಯಲ್ಲಿ ಪ್ರವಾಸಿ ತಾಣವಾಗಿರುವ ತಣ್ಣೀರುಬಾವಿ ಮತ್ತು ಬೆಂಗ್ರೆ ಪ್ರದೇಶವನ್ನು ಕಡೆಗಣಿಸಿರುವ ಕ್ರಮವನ್ನು ಖಂಡಿಸಿ ಬೆಂಗ್ರೆ ಪ್ರದೇಶಕ್ಕೆ ಸರಕಾರಿ ಬಸ್ಸು  ಓಡಿಸಲು ಆಗ್ರಹಿಸಿ DYFI ಹಾಗೂ CPIM ಬೆಂಗ್ರೆ ವತಿಯಿಂದ ಸೋಮವಾರ ಮುಖ್ಯ ರಸ್ತೆ ಕಸಬಾ ಬೆಂಗ್ರೆಯಲ್ಲಿ ಸಲೀಂ ಅಂಗಡಿ ಬಳಿ ಪ್ರತಿಭಟನೆ ನಡೆಯಿತು.


ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಬಿ.ಕೆ. ಇಮ್ತಿಯಾಝ್ ಮಾತನಾಡುತ್ತಾ ತಣ್ಣೀರುಬಾವಿ–ಕಸಬಾ ಬೆಂಗ್ರೆ ಭಾಗದ ಜನರ ದೈನಂದಿನ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ಬಸ್ ಸೇವೆ ಅತ್ಯಂತ ಅವಶ್ಯಕವಾಗಿದೆ. ವಿಶೇಷವಾಗಿ ಈ ಭಾಗದ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಕಾರ್ಮಿಕರು ಶಿಕ್ಷಣ, ಉದ್ಯೋಗ ಮತ್ತು ಇತರ ಅಗತ್ಯ ಕೆಲಸಗಳಿಗಾಗಿ ಮಂಗಳೂರು ನಗರವನ್ನು ಅವಲಂಬಿಸಿರುವುದರಿಂದ ಸಮರ್ಪಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.ಕಸಬಾ ಬೆಂಗ್ರೆಯ ಜನರು ಡಿಸಿ ಕಚೇರಿಗೆ ಹೋಗಬೇಕಾದರೆ 500 ರೂಪಾಯಿ ಖರ್ಚು ಮಾಡಬೇಕಾಗಿದೆ ಇಲ್ಲಿನ ಜನರ ಮತ್ತು ಪ್ರವಾಸಿಗರಿಗಾಗಿ ಸರಕಾರಿ ಬಸ್ಸಿನ ಅಗತ್ಯತೆ ಇದೆ ಎಂದು ಅವರು ಹೇಳಿದರು.


ಡಿವೈಎಫ್ಐ ಮಂಗಳೂರು ನಗರ ಕಾರ್ಯದರ್ಶಿ ತೈಯೂಬ್ ಬೆಂಗ್ರೆ ಮಾತನಾಡಿ, ತಣ್ಣೀರುಬಾವಿ–ಕಸಬಾ ಬೆಂಗ್ರೆ ಭಾಗದ ಜನರಿಗೆ ಸರ್ಕಾರಿ ಬಸ್ ಸೇವೆಯ ತೀವ್ರ ಅಗತ್ಯವಿದೆ. ಈ ಭಾಗದಿಂದ ಮಂಗಳೂರಿನ ವಿವಿಧ ಶಾಲಾ–ಕಾಲೇಜುಗಳು, ಉದ್ಯೋಗ ಸ್ಥಳಗಳು, ಆಸ್ಪತ್ರೆಗಳು, ಮಹಾನಗರ ಪಾಲಿಕೆ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ನಗರದ ಹಲವು ಭಾಗಗಳಿಗೆ ಪ್ರತಿನಿತ್ಯ ಜನರು ಸಂಚರಿಸುತ್ತಿದ್ದಾರೆ. ಆದ್ದರಿಂದ ಜನರ ಅಗತ್ಯಕ್ಕೆ ಅನುಗುಣವಾಗಿ ಎರಡು ಕೆ.ಎಸ್.ಆರ್.ಟಿ.ಸಿ. ಬಸ್‌ಗಳನ್ನು ಬೆಂಗ್ರೆ ಪ್ರದೇಶಕ್ಕೆ ಮೀಸಲಿಟ್ಟು ಮುಕ್ತ ಸೇವೆ ಆರಂಭಿಸಬೇಕು ಎಂದು ಆಗ್ರಹಿಸಿದರು.

ದಲಿತ ಹಕ್ಕುಗಳ ಸಮಿತಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಕೃಷ್ಣ ತಣ್ಣೀರುಬಾವಿ ಮಾತನಾಡಿ, ಬೆಂಗ್ರೆ ಪ್ರದೇಶದ ಜನರ ಬಹುಕಾಲದ ಸಾರ್ವಜನಿಕ ಸಾರಿಗೆ ಬೇಡಿಕೆಯನ್ನು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಗಂಭೀರವಾಗಿ ಪರಿಗಣಿಸಿ, ಕೂಡಲೇ ಬಸ್ ಸೇವೆ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಡಿವೈಎಫ್ಐ ಮುಖಂಡರಾದ ಹನೀಫ್ ಬೆಂಗ್ರೆ, ನೌಶಾದ್ ಬೆಂಗ್ರೆ,ರಿಜ್ವಾನ್ ಬೆಂಗ್ರೆ, ಮುಹಾಝ್ ಬೆಂಗ್ರೆ, ಕಬೀರ್ ಬೆಂಗ್ರೆ, ನಾಝಿಮ್, ಜಂಶೀರ್, ನಿಸಾರ್, ಕಬೀರ್, ಶಾಫಿಲ್, ಇಸ್ಮಾಯಿಲ್, ಸಯ್ಯದ್ ಆಲಿ, ಸಿಪಿಐಮ್ ಮುಖಂಡರಾದ ಪಿ.ಜಿ ರಫೀಕ್, ನೌಶಾದ್ ಬೆಂಗ್ರೆ, ತಂಝೀಲ್ ಬೆಂಗ್ರೆ ಸುನೀತಾ ತಣ್ಣೀರುಬಾವಿ ಫಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಮುಖಂಡರಾದ ಸರ್ಫರಾಝ್, ಮುದಸ್ಸೀರ್ ಋಣ ಮುಕ್ತ ಹೋರಾಟ ಸಮಿತಿ ಮುಖಂಡರಾದ ಝೊಹರಾ ಸುಹಾನಾ, ಶರೀಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೆಎಸ್ಸಾರ್ಟಿಸಿ ಮಂಗಳೂರು ಡಿಪೋ ಸುಪರಿಡೆಂಟ್ ಮ್ಯಾನೇಜರ್ ಮಂಜುನಾಥ್ ಪ್ರತಿಭಟನೆ ಸಭೆಗೆ ಆಗಮಿಸಿ ಮನವಿ ಸ್ವೀಕರಿಸಿ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಭರವಸೆ ನೀಡಿದರು.


100 ಎಲೆಕ್ಟ್ರಿಕ್ ಬಸ್  ಸೇವೆ ಬಸ್ ಇಲ್ಲದೆ ಪರದಾಡುತ್ತಿರುವ  ಪ್ರದೇಶಗಳಿಗೆ ಮೊದಲ ಆದ್ಯತೆ ನೀಡಬೇಕು ವಿದ್ಯಾರ್ಥಿಗಳು, ಕಾರ್ಮಿಕರಿಗೆ ಅನುಕೂಲ ಆಗುವಂತೆ ಬಸ್ ಓಡಿಸಬೇಕು. ಖಾಸಗಿ ಧಣಿಗಳ ಪ್ರಭಾವಕ್ಕೆ ಮಣಿಯದೆ ಎಲೆಕ್ಟ್ರಿಕ್ ಬಸ್ ಓಡಬೇಕು.ನರ್ಮ್ ಬಸ್ಸುಗಳಂತೆ ಎಲೆಕ್ಟ್ರಿಕ್ ಬಸ್ ವಿಫಲ ಆಗದಂತೆ ಅಧಿಕಾರಿಗಳು ಸಿದ್ಧತೆಯೊಂದಿಗೆ ಬಸ್ ಸೇವೆ ಆರಂಭಿಸಬೇಕು ಎಂದು ಬಿ.ಕೆ. ಇಮ್ತಿಯಾಝ್ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article