ಬಿ.ಸಿ.ರೋಡಿನಲ್ಲಿ 3 ಲ.ರೂ. ಮೌಲ್ಯದ ನಗ, ನಗದು, ಬೆಳ್ಳಿಯ ಸೊತ್ತು ಕಳವು
ಬಂಟ್ವಾಳ: ಬಿ.ಸಿ.ರೋಡಿನ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಮನೆಯೊಂದಕ್ಕೆ ಯಾರೂ ಇಲ್ಲದ ವೇಳೆ ಮನೆಯ ಮುಂಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿರುವ ಕಳ್ಳರು ಸುಮಾರು 3 ಲಕ್ಷ ರೂ. ಮೌಲ್ಯದ ನಗದು, ಚಿನ್ನಾಭರಣ ಹಾಗೂ ಬೆಳ್ಳಿ ಸೊತ್ತುಗಳನ್ನು ಕಳವುಗೈದು ಪರಾರಿಯಾದ ಘಟನೆ ನಡದಿದೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿರುವ ಬಿ.ಸಿ.ರೋಡ್ ಬಸ್ ನಿಲ್ದಾಣದ ಹಿಂಭಾಗದ "ಅನುಗ್ರಹ" ಹೆಸರಿನ ಮನೆಯಲ್ಲಿ ವಾಸವಾಗಿರುವ ಶೃತಿ ಪೈ (35) ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ.
ಶೃತಿ ಪೈ ಅವರು ತಮ್ಮ ಅತ್ತೆಯೊಂದಿಗೆ ಗೋವಾದ ಮಡಗಾವ್‌ನಲ್ಲಿರುವ ತವರು ಮನೆಗೆ ತೆರಳಿದ್ದರು. ಸೆ.೪ರಂದು ಸಂಜೆ ಮಡಗಾವ್‌ನಿಂದ ವಾಪಾಸ್ ಬಂದಿದ್ದ ಅವರು ಮನೆಯಿ೦ದ ಬಟ್ಟೆಗಳನ್ನು ತೆಗೆದುಕೊಂಡು ಬಾಗಿಲಿಗೆ ಬೀಗ ಹಾಕಿ, ಬಳಿಕ ಮಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿ ಅಲ್ಲಿಯೇ ಉಳಿದುಕೊಂಡಿದ್ದರು.
ಸೆ.6 ರಂದು ಮಧ್ಯಾಹ್ನದ ಹೊತ್ತಿಗೆ ಮಂಗಳೂರಿನಿಂದ ಮನೆಗೆ ವಾಪಸಾದಾಗ ಮನೆಯ ಮುಂಭಾಗದ ಬಾಗಿಲು ತೆರೆದಿರುವುದು ಬೆಳಕಿಗೆ ಬಂದಿದ್ದು, ಅನುಮಾನಗೊಂಡ ಒಳಗಡೆ ಪರಿಶೀಲಿಸಿದಾಗ ಮೂರು ಕೊಠಡಿಗಳ ಬೀಗಗಳು ಮುರಿದಿರುವುದು ಹಾಗೂ ಗೋಡ್ರೆಜ್ ಕಪಾಟಿನಲ್ಲಿದ್ದ ಬಟ್ಟೆ ಮತ್ತು ಮನೆಯ ದಾಖಲೆಪತ್ರಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡು ಬಂದಿದೆ.
ಕಪಾಟಿನಲ್ಲಿರಿಸಲಾಗಿದ್ದ ನಗದು, ಚಿನ್ನಾಭರಣ ಮತ್ತು ಬೆಳ್ಳಿ ಸೊತ್ತುಗಳು ಕಾಣೆ ಯಾಗಿರುವುದಾಗಿ ಶೃತಿ ಪೈ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
50 ಸಾ.ರೂ. ನಗದು, ನವಿಲಿನ ಚಿತ್ರವಿರುವ 8 ಗ್ರಾಂ. ತೂಕದ ಎರಡು ಬೆಂಡೋಲೆಗಳು, 8 ಗ್ರಾಂ. ತೂಕದ ಒಂದು ಏರಿಯಲ್ ಚೈನ್ ಹಾಗೂ 58,000 ಮೌಲ್ಯದ ಬೆಳ್ಳಿಯ ಸೊತ್ರುಗಳು ಸೇರಿದ್ದು, ಇವುಗಳ ಒಟ್ಟು ಮೌಲ್ಯ 3 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಸುದ್ದಿ ತಿಳಿದ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.