ಬಿ.ಸಿ. ರೋಡಿನಲ್ಲಿ ಬಸ್ಸಿಗಾಗಿ ಪರದಾಟ: ವಾಹನ ದಟ್ಟಣೆಯಿಂದ ಟ್ರಾಫಿಕ್ ಜಾಮ್

ಬಿ.ಸಿ. ರೋಡಿನಲ್ಲಿ ಬಸ್ಸಿಗಾಗಿ ಪರದಾಟ: ವಾಹನ ದಟ್ಟಣೆಯಿಂದ ಟ್ರಾಫಿಕ್ ಜಾಮ್


ಬಂಟ್ವಾಳ: ಗಣೇಶ ಹಬ್ಬ ಸಹಿತ ಸಾಲು,ಸಾಲು ರಜೆಯ ಹಿನ್ನಲೆಯಲ್ಲಿ ಸರಕಾರಿ ನೌಕರರು, ವಿದ್ಯಾರ್ಥಿಗಳು ತಮ್ಮ, ತಮ್ಮ ಊರಿಗೆ ತೆರಳಲು ಬಸ್ಸಿಗಾಗಿ ಪರದಾಟ ನಡೆಸುತ್ತಿದ್ದ ದೃಶ್ಯ ಶನಿವಾರ ಬಿ.ಸಿ.ರೋಡಿನಲ್ಲಿ ಕಂಡು ಬಂತು. ಈ ನಡುವೆ ವಾಹನ ದಟ್ಟಣೆಯಿಂದಾಗಿ ಆಗಾಗ ಟ್ರಾಫಿಕ್ ಜಾಮ್ ಕೂಡ ಉಂಟಾಯಿತು.


ಶನಿವಾರ, ಭಾನುವಾರ, ಸೋಮವಾರ ಸರಕಾರಿ ರಜೆ ಇದ್ದು, ತಾಲೂಕಿನ ವಿವಿಧ ಇಲಾಖೆಯಲ್ಲಿರುವ ಹೊರಜಿಲ್ಲೆಯ ನೌಕರರು ಕುಟುಂಬ ಸಮೇತರಾಗಿ ಗಣೇಶಹಬ್ಬದ ಹಿನ್ನಲೆಯಲ್ಲಿ ತಮ್ಮ ಊರಿಗೆ ತೆರಳಲೆಂದು ಲಗ್ಗೇಜ್‌ನೊಂದಿಗೆ ಬಸ್ ನಿಲ್ದಾಣಕ್ಕೆ ಬಂದಿದ್ದರು.

ಕೆಲವರು ಬಸ್ ಟಿಕೇಟ್ ಕಾಯ್ದಿದಿರಿಸಿದ್ದರೂ, ಬಸ್‌ನೊಳಗೆ ಪ್ರವೇಶಿಸಲು ಹರಸಾಹಸ ಪಡಬೇಕಾಯಿತು. ಈ ನಡುವೆ ಜಿಲ್ಲೆಯ ಪ್ರಯಾಣಿಕರು ತಮ್ಮ ಊರಿಗೆ ತೆರಳುತ್ತಿದ್ದರಿಂದ ಬಸ್‌ಗಳೆಲ್ಲವೂ ತುಂಬಿ ತುಳುಕಿತ್ತು. ಬಹುತೇಕ ಮಂದಿ ಮಂಗಳೂರಿನಿಂದಲೇ ಬಸ್ ಹತ್ತಿ ಬಂದಿದ್ದರಿಂದ ಬಿ.ಸಿ. ರೋಡಿನಲ್ಲಿ ಬಸ್ ಹತ್ತಲು ಪರದಾಡುವಂತಾಯಿತು.

ಗಣೇಶ ಚತುರ್ಥಿಯ ಹಿನ್ನಲೆಯಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದ್ದರೂ, ದ.ಕ. ಜಿಲ್ಲೆಯ ಮಟ್ಟಿಗೆ ಇದು ಅನ್ವಯಿಸಿದಂತೆ ಕಂಡು ಬಂದಿಲ್ಲ, ಪ್ರತಿ ಹಬ್ಬದ ಸಂದರ್ಭ ಸರಕಾರ ಹೆಚ್ಚುವರಿ ಬಸ್ ಓಡಿಸುವ ಡೈಲಾಗ್ ಹೊಡಿತ್ತದೆ ವಿನಹ ಪ್ರಯಾಣಿಕರು ಮಾತ್ರ ತಡರಾತ್ರಿವರೆಗೂ ಬಸ್ ಕಾದು, ಕಾದು ಸುಸ್ತಾದ ಉದಾಹರಣೆಗಳಿವೆ.

ಹಬ್ಬದ ಹಿನ್ನಲೆಯಲ್ಲಿ ಖಾಸಗಿ ಬಸ್ ಸೇವೆ ದುಬಾರಿಯಾದುದರಿಂದ ಬಹುತೇಕ ಮಂದಿ ಕೆಎಸ್‌ಆರ್‌ಟಿಸಿಯನ್ನೇ ಅವಲಂಬಿತರಾಗಿದ್ದಾರೆ. ಅದರಲ್ಲು ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆಯಿಂದಾಗಿ ಕೆಎಸ್‌ಆರ್‌ಟಿಸಿಯ ಸಾಮಾನ್ಯ ಬಸ್‌ಗಳನ್ನೇ ಕಾದು ಕುಳಿತಿದ್ದರು.

ವಾಹನದಟ್ಟಣೆ:

ಹಬ್ಬದ ಹಿನ್ನಲೆಯಲ್ಲಿ ಮಂಗಳೂರು-ಬೆಂಗಳೂರು ಮಾತ್ರವಲ್ಲ ಇತರೆಡೆ ಪ್ರಯಾಣಿಸುವ ಮಾರ್ಗಗಳು ಬೆಳಗ್ಗಿನಿಂದಲೇ ವಾಹನದಟ್ಟಣೆಯಿಂದ ಕೂಡಿತ್ತು. ಬಿ.ಸಿ.ರೋಡಿನಲ್ಲಿ ಎಲ್ಲಾ ಬಸ್‌ಗಳು ಕೂಡ ರಾಜಾರಸ್ತೆಯಲ್ಲೇ ನಿಂತು ಪ್ರಯಾಣಿಕರನ್ನು ಹತ್ತಿಸುವುದು ಮತ್ತು ಇಳಿಸುವುದರಿಂದ ಆಗಾಗ ಟ್ರಾಫಿಕ್ ಜಾಮ್ ಉಂಟಾಗುತ್ತಲೇ ಇದ್ದು,ಪಾದಚಾರಿಗಳು ರಸ್ತೆ ದಾಟಲು ಪರದಾಡಬೇಕಾಯಿತು. ಪ್ರಯಾಣಿಕರು ಅನಿವಾರ್ಯವೆಂಬಂತೆ ಪುಟ್ ಪಾತ್, ರಸ್ತೆಯಲ್ಲೇ ಮಕ್ಕಳನ್ನು ಹಿಡಿದುಕೊಂಡು ಬಸ್ ಕಾಯಬೇಕಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article