ಖರ್ಗೆ ಭಾಷಣದ ಸ್ಥಳ ಶುದ್ದೀಕರಣ-ಮನುಸ್ಮೃತಿ ಜಾರಿಗಾಗಿ ಪೂರ್ವ ತಯಾರಿ: ಮಹಮ್ಮದ್ ಆಲಿ ಆರೋಪ

ಖರ್ಗೆ ಭಾಷಣದ ಸ್ಥಳ ಶುದ್ದೀಕರಣ-ಮನುಸ್ಮೃತಿ ಜಾರಿಗಾಗಿ ಪೂರ್ವ ತಯಾರಿ: ಮಹಮ್ಮದ್ ಆಲಿ ಆರೋಪ


ಪುತ್ತೂರು: ಮಲ್ಲಿಕಾರ್ಜುನ ಖರ್ಗೆ ಭಾಷಣದ ಸ್ಥಳ ಶುದ್ಧೀಕರಣ ಕೃತ್ಯವನ್ನು ಮತ್ತು ರಾಹುಲ್ ಗಾಂಧಿ ಅವರ ಮೇಲೆ ಎಫ್‌ಐಆರ್ ದಾಖಲಿಸಿರುವುದನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಮತ್ತು ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಪುತ್ತೂರಿನ ಬಸ್ ನಿಲ್ದಾಣದ ಬಳಿಯ ಗಾಂಧೀಕಟ್ಟೆಯಲ್ಲಿ ಮೌನ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯ ಕೊನೆಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ಅವರು, ದಲಿತ ಸಮುದಾಯದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೀನಾಯ ರೀತಿಯಲ್ಲಿ ಅಪಮಾನಿಸಿರುವುದು ದಲಿತ ಸಮುದಾಯಕ್ಕೆ ಮಾತ್ರವಲ್ಲದೆ ಭಾರತದ ಸಂವಿಧಾನಕ್ಕೆ ಮಾಡಿದ ಅವಮಾನವಾಗಿದೆ. ಇದು ಕೇಂದ್ರ ಸರ್ಕಾರ ಮನುಸ್ಮೃತಿಯನ್ನು ಜಾರಿಗೊಳಿಸಲು ಮಾಡಿರುವ ಪೂರ್ವ ತಯಾರಿಯ ಭಾಗವಾಗಿದ್ದು, ಸಂವಿಧಾನವನ್ನು ಧಿಕ್ಕರಿಸುವ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಬಿಜೆಪಿ ಸಂಘ ಪರಿವಾರದ ಕೃತ್ಯವಾಗಿದೆ ಎಂದು ಆರೋಪಿಸಿದ ಅವರು ಸೈದ್ಧಾಂತಿಕ ನೆಲೆಯಲ್ಲಿ ಕೆಲಸ ಮಾಡುತ್ತಿರುವ ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪ್ರಚಾರ ಸಮಿತಿಯ ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಅವರು ಮಾತನಾಡಿದರು.

ಪ್ರಚಾರ ಸಮಿತಿಯ ರಾಜ್ಯ ಸಂಯೋಜಕರಾದ ಎನ್. ಚಂದ್ರಹಾಸ ಶೆಟ್ಟಿ ಮತ್ತು ಶಶಿಕಿರಣ್ ರೈ, ವಿಟ್ಲ ಬ್ಲಾಕ್ ಪ್ರಚಾರ ಸಮಿತಿಯ ಅಧ್ಯಕ್ಷ ಶ್ರೀಧರ್ ಶೆಟ್ಟಿ, ಪಕ್ಷದ ಮುಖಂಡರಾದ ಶಕೂರ್ ಹಾಜಿ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸೋಮನಾಥ್ ಉಪ್ಪಿನಂಗಡಿ, ವೇದನಾಥ ಸುವರ್ಣ ನರಿಮೊಗರು, ಬೋಳೋಡಿ ಚಂದ್ರಹಾಸ ರೈ, ಅಬ್ದುಲ್ ರಹಿಮಾನ್ ಯುನಿಕ್, ಜಾನ್ ಕೆನ್ಯೂಟ್ ಮಸ್ಕರೇನಸ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article