ಸವಾಲುಗಳನ್ನು ದೃತಿಗೆಡದೆ ಆತ್ಮವಿಶ್ವಾಸದಿಂದ ಎದುರಿಸಿ ಮುನ್ನಡೆಯಿರಿ: ಸಂಗೀತ ನಿರ್ದೇಶಕ ರವಿ ಬಸ್ರೂರು

ಸವಾಲುಗಳನ್ನು ದೃತಿಗೆಡದೆ ಆತ್ಮವಿಶ್ವಾಸದಿಂದ ಎದುರಿಸಿ ಮುನ್ನಡೆಯಿರಿ: ಸಂಗೀತ ನಿರ್ದೇಶಕ ರವಿ ಬಸ್ರೂರು


ಉಜಿರೆ: ಜೀವನದಲ್ಲಿ ಏನನ್ನಾದರೂ ಸಾಧಿಸಲೇಬೇಕು ಅಂತ ಹೊರಟಾಗ ಸವಾಲುಗಳು ಎದುರಾಗುವುದು ಸಹಜ. ಆದರೆ ನಮ್ಮ ಗುರಿಯನ್ನು ಬೆನ್ನತ್ತಿ, ಛಲದಿಂದ ಮುನ್ನಡೆದು ಪಣ ತೊಟ್ಟು ಹೊರಟಾಗ ಎದುರಿಗಿರುವ ಎಲ್ಲಾ ಸಮಸ್ಯೆ, ಸವಾಲುಗಳು ತಾವಾಗಿಯೇ ನಮ್ಮಿಂದ ದೂರ ಸರಿಯುತ್ತವೆ. ಕಷ್ಟ-ನಷ್ಟಗಳ ಎದುರು ಧೃತಿಗೆಡದೆ, ನಮ್ಮ ಕೆಲಸಗಳಲ್ಲಿ ನಂಬಿಕೆ, ಶ್ರದ್ಧೆ ಮತ್ತು ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ವಿಯಾಗಬಹುದು ಎಂದು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದರು.

ಅವರು ಉಜಿರೆ ಶ್ರೀ ಧ.ಮಂ. ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ‘ಎಸ್‌ಡಿಎಂ ಆರೋಹಂ-2026’ರ ಅಂಗವಾಗಿ ಹಮ್ಮಿಕೊಂಡಿದ್ದ ಸ್ಟಾರ್ ನೈಟ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬದಲಾವಣೆ ಜಗದ ನಿಯಮ, ಕಾಲ ಬದಲಾದಂತೆ ನಾವು ಕೂಡ ಬದಲಾವಣೆಗೆ ಒಗ್ಗಿ ಕೊಳ್ಳಬೇಕು. ಜನ ನಮ್ಮಿಂದ ಏನು ಬಯಸುತ್ತಾರೆ ಅನ್ನೋದನ್ನು ಅರಿತು ನಾವು ಅದನ್ನು  ಕೊಟ್ಟಾಗ ಮಾತ್ರ ನಮ್ಮ ವೃತ್ತಿ, ಬದುಕು ಸಾರ್ಥಕ ಮತ್ತು ಸಾಧಕ. ಸಮಯದ ಮಹತ್ವವನ್ನು ಅರಿತು ಕಾಲಹರಣ ಮಾಡದೇ ಇರುವ ಸಮಯವನ್ನು ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಸದುಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.

ಅನೇಕ ಸೋಲುಗಳ ನಡುವೆ ಗೆಲುವನ್ನು ಅರಸಿ ಹೊರಟಾಗ ನಟ ಪುನೀತ್ ರಾಜಕುಮಾರ್, ಪ್ರಭಾಸ್, ಯಶ್, ಶ್ರೀ ಮುರುಳಿ ಮತ್ತು ಸಂಗೀತ ನಿರ್ದೇಶಕರಾದ ಹಂಸಲೇಖ, ಅರ್ಜುನ್ ಜನ್ಯ ಸೇರಿದಂತೆ ಹಲವರು ಅವಕಾಶ ನೀಡಿದರು ಎಂದು ಸ್ಮರಿಸಿಕೊಂಡರು. ಉಪನ್ಯಾಸಕ ಡಾ. ಮಹೇಶ್ ಕುಮಾರ್ ಶೆಟ್ಟಿ ರವಿ ಬಸ್ರೂರು ಜತೆಗೆ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. 

ಸ್ಟಾರ್ ನೈಟ್ ಕಾರ್ಯಕ್ರಮದಲ್ಲಿ ಕಂಬೋಜಿ ತಂಡದ ವತಿಯಿಂದ ಸಂಗೀತ ಸಂಜೆ ನಡೆಯಿತು. ತಂಡದ ಕಲಾವಿದರು ಜನಪ್ರಿಯ ಕನ್ನಡ, ಹಿಂದಿ ಮತ್ತು ಮಲಯಾಳಂ ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮನರಂಜನೆ ನೀಡಿದರು. ಕಾರ್ಯಕ್ರಮದಲ್ಲಿ ರವಿ ಬಸ್ರೂರು ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ, ಉಪ ಪ್ರಾಂಶುಪಾಲೆ ನಂದಾಕುಮಾರಿ ಕೆ.ಪಿ., ಡೀನ್‌ಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಂದೀಪ್ ನಿರ್ದೇಶನದ ಕ್ರೈಮ್ ಥ್ರಿಲ್ಲರ್ ಮೂವಿ ‘ಅಭೇದ್ಯಮಂ’ನ ಮೋಷನ್ ಪೋಸ್ಟರ್‌ನ್ನು ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಪೋಸ್ಟರ್ ಅನಾವರಣಗೊಳಿಸಿ ಸಿನಿಮಾ ತಂಡಕ್ಕೆ ಶುಭ ಹಾರೈಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article