ಸುತ್ತೋಲೆಗಳ ಸರಳೀಕರಣ ಅಗತ್ಯ: ಸುನಿಲ್ ಕುಮಾರ್

ಸುತ್ತೋಲೆಗಳ ಸರಳೀಕರಣ ಅಗತ್ಯ: ಸುನಿಲ್ ಕುಮಾರ್

ಸಾಮಾನ್ಯ ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದೇ ಪ್ರಜಾಸೇವೆ ಆಂದೋಲನದ ಉದ್ದೇಶ


ಕಾರ್ಕಳ: ಸಾಮಾನ್ಯ ಜನರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಪದೇಪದೇ ಅಲೆಯುವುದನ್ನು ತಪ್ಪಿಸಿ, ಸರ್ಕಾರದ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಪ್ರಜಾಸೇವೆ ಹಾಗೂ ಜನಸ್ಪಂದನ ಸೇವೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.

ಅವರು ಶನಿವಾರ ಅಜೆಕಾರಿನಲ್ಲಿ ತಾಲೂಕು ಆಡಳಿತ ಹಾಗೂ ಕಾರ್ಕಳ ಪ್ರಜಾಸೇವಾ ಇಲಾಖೆಯ ವತಿಯಿಂದ ಆಯೋಜಿಸಲಾದ ಹೊಬಳಿ ಮಟ್ಟದ ಪ್ರಜಾಸೇವೆ ಆಂದೋಲನವನ್ನು ಉದ್ಘಾಟಿಸಿ ಮಾತನಾಡಿದರು.

ಅಧಿಕಾರಿಗಳು ಯಾವುದೇ ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿಯದೆ, ನಿಯಮಾನುಸಾರ ನೇರವಾಗಿ ಕೆಲಸ ಮಾಡಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವಾಗ ಸಾಧಕ-ಬಾಧಕಗಳನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಕಂಡುಕೊಳ್ಳಬೇಕು. ಹಲವು ಸಂದರ್ಭಗಳಲ್ಲಿ ಸರ್ಕಾರದ ಸುತ್ತೋಲೆಗಳೇ ಜನಸಾಮಾನ್ಯರ ಸಮಸ್ಯೆಗಳಿಗೆ ತೊಡಕಾಗುತ್ತಿವೆ. ಆದ್ದರಿಂದ ಸುತ್ತೋಲೆಗಳನ್ನು ಸರಳೀಕರಿಸುವ ಅಗತ್ಯವಿದೆ ಎಂದರು.

ಅಕ್ರಮ-ಸಕ್ರಮ ಅರ್ಜಿಗಳನ್ನು ಆ್ಯಪ್ ಮೂಲಕ ವಿಲೇವಾರಿ ಮಾಡುವ ಪ್ರಕ್ರಿಯೆಯಲ್ಲಿ ಕಾರ್ಕಳ ತಾಲೂಕಿನಲ್ಲಿ 7,773 ಅರ್ಜಿಗಳು ರದ್ದಾಗಿದ್ದು, ಇದರಿಂದ ಸಾರ್ವಜನಿಕರಿಗೆ ದೊಡ್ಡ ಪ್ರಮಾಣದ ನಷ್ಟವಾಗಿದೆ. ಈ ಬಗ್ಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.

ಕಾರ್ಕಳ ತಾಲೂಕಿನಲ್ಲಿ 8,554 ವೃದ್ಧಾಪ್ಯ ವೇತನ ಹಾಗೂ ಇತರ ಪಿಂಚಣಿಗಳು ರದ್ದಾಗಿವೆ. ಕುಮ್ಕಿ ಹಾಗೂ ಸರ್ಕಾರಿ ಜಾಗಗಳಲ್ಲಿ ವಾಸಿಸುತ್ತಿರುವವರು ದಾಖಲೆಗಳ ಕೊರತೆಯಿಂದ ತೆರಿಗೆ ಪಾವತಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಸ್ಯೆಗಳನ್ನು ಪರಿಹರಿಸುವುದು ಕಷ್ಟವಾಗಿದ್ದು, ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. 9/11 ಹಾಗೂ ಪ್ರಾಧಿಕಾರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಸುನಿಲ್ ಕುಮಾರ್ ಹೇಳಿದರು.

ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ಅಧಿಕಾರಿಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ತೆರಿಗೆ ಪಾವತಿಸುವ ಸಾಮಾನ್ಯ ಜನರೇ ಸರ್ಕಾರದ ನಿಜವಾದ ಪ್ರಭುಗಳು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪಬೇಕು. ಕಸ್ತೂರಿ ರಂಗನ್, 9/11 ಹಾಗೂ ಸರ್ವರ್ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅಧಿಕಾರಿಗಳು ಸ್ಪಂದನಶೀಲರಾಗಬೇಕು. ಬಡವರು, ಶ್ರೀಮಂತರು ಎನ್ನದೆ ಎಲ್ಲರಿಗೂ ಸಮಾನವಾಗಿ ಸೇವೆ ದೊರೆಯಬೇಕು. ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಮಾಡಬಾರದು ಎಂದರು.

ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಇಶಿತಾ ಗುಪ್ತ ಮಾತನಾಡಿದರು. ಕುಂದಾಪುರ ಸಹಾಯಕ ಆಯುಕ್ತೆ ರಶ್ಮಿ ಆರ್. ಪ್ರಸ್ತಾವಿಕವಾಗಿ ಮಾತನಾಡಿ, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ, ಸ್ಥಳೀಯ ಮಟ್ಟದಲ್ಲೇ ಪರಿಹರಿಸುವ ಪ್ರಯತ್ನವೇ ಪ್ರಜಾಸೇವೆ ಆಂದೋಲನದ ಉದ್ದೇಶವಾಗಿದೆ. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶನಿವಾರ ಆಂದೋಲನ ನಡೆಯಲಿದ್ದು, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹರಿಸಲಾಗುವುದು. ಸರ್ಕಾರದ ಸೇವೆಗಳನ್ನು ಪಡೆಯುವುದು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಸಾಂತ್ ಪಿ. ರಾವ್, ಕಾರ್ಕಳ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾತನಾಡಿದರು. ಸರ್ಕಾರದ ವಿವಿಧ ಸವಲತ್ತುಗಳು ಒಂದೇ ಸೂರಿನಡಿ ಸುಲಭವಾಗಿ ಫಲಾನುಭವಿಗಳಿಗೆ ತಲುಪುವಂತಾಗಬೇಕು. ಐದು ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳನ್ನು ಪ್ರಜಾಸೇವೆ ಮೂಲಕ ಜನರ ಮನೆಬಾಗಿಲಿಗೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್. ಸ್ವಾಗತಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article