ಎಂಜಿನಿಯರ‍್ಸ್ ಡೇ ಪ್ರಯುಕ್ತ ಮಕ್ಕಳಿಗೆ ಅಂತರ್ ಶಾಲಾ ಸ್ಪರ್ಧೆ
ಪುತ್ತೂರು: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಎಂಜಿನಿಯರ್ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸೆ.15 ರಂದು ಪುತ್ತೂರು ಮತ್ತು ಕಡಬ ತಾಲೂಕಿನ 3ರಿಂದ 10ನೇ ತರಗತಿಯ ಮಕ್ಕಳಿಗಾಗಿ ಅಂತರ್ ಶಾಲಾ ಸ್ಪರ್ಧೆಗಳನ್ನು ಪುತ್ತೂರು ವಿವೇಕಾನಂದ ಆಂಗ್ಲಮಾದ್ಯಮ ಶಾಲೆಯಲ್ಲಿ ನಡೆಸಲಾಗುವುದು. ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಪುತ್ತೂರು ಸಂಸ್ಥೆಯ ಸದಸ್ಯರು ಮತ್ತು ಮಕ್ಕಳಿಗೆ ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ ನಡೆಸಲಾಗುವುದು ಎಂದು ಸಂಸ್ಥೆ ಅಧ್ಯಕ್ಷ, ಕೋಶಾಧಿಕಾರಿ ಕಾವ್ಯಶ್ರೀ ಮತ್ತು ಸದಸ್ಯರಾದ ಶಿವಪ್ರಸಾದ್ ಮತ್ತು ನಮಿತಾ ತಿಳಿಸಿದರು.
ಅವರು ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಸೆ.20ಕ್ಕೆ ಪ್ರಶಾಂತ್ ಮಹಲ್‌ನಲ್ಲಿ ಎಂಜಿನಿಯರ‍್ಸ್ ಡೇ ಆಯೋಜನೆ ಮಾಡಲಾಗಿದ್ದು, ರಾಜ್ಯ ಪ್ರಶಸ್ತಿ ಶಿಕ್ಷಕ ಸತೀಶ್ ಭಟ್ ಉದ್ಘಾಟಿಸಲಿದ್ದಾರೆ. ಮಂಗಳೂರು ಎನ್‌ಎಂಪಿಟಿ ತಾಂತ್ರಿಕ ಸಲಹೆಗಾರ ಡಾ. ದಯಾನಂದ್ ಶೆಟ್ಟಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಂಜಿನಿಯರ್‌ಗಳಾದ ಕೇಶವ ಭಟ್ ಮತ್ತು ಆಲಿ ಕುಂಞಿ ಅವರನ್ನು ಸನ್ಮಾನಿಸಲಾಗುವುದು. ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಅತ್ಯಧಿಕ ಅಂಕ ಗಳಿಸಿದ ಇಬ್ಬರು ಸಿವಿಲ್ ಎಂಜಿನಿಯರ್ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಸಂಸ್ಥೆಯ ಸದಸ್ಯರಿಗೆ ಇನ್‌ಸ್ಟಾ ಎಂಜಿನಿಯರ್ ಅವಾರ್ಡ್ ಪ್ರದಾನ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.