ಪೊಲೀಸರ ನೋಟಿಸ್ ಕೂದಲಿಗೆ ಸಮ: ಡಾ. ಭಟ್ ಆಕ್ರೋಶ
Tuesday, September 29, 2026
ಬಂಟ್ವಾಳ: ತಾಲೂಕಿನ ಕೊಳತ್ತಮಜಲು ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೀಡಿರುವ ನೊಟೀಸಿನ ಕುರಿತು ಬಿ.ಸಿ.ರೋಡಿನಲ್ಲಿ ಬೃಹತ್ ಪ್ರತಿಭಟನೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರತಿಕ್ರಿಯಿಸಿದ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು ಪೊಲೀಸರು ನೀಡಿರುವ ನೋಟೀಸ್ ನನ್ನ ಕೂದಲಿಗೆ ಸಮ. ನನ್ನ ಮೇಲೆ 110 ಕೇಸ್‌ಗಳಿವೆ. ಇದ್ಯಾವ ಲೆಕ್ಕ” ಎಂದು ಹೇಳಿದ್ದಾರೆ.
“ಸಂವಿಧಾನ ನೀಡಿರುವ ಸ್ವಾತಂತ್ರ್ಯದ ಅಡಿಯಲ್ಲಿ ಫೋನ್ ಮಾಡಿ ಮಾತನಾಡಿದ್ದೇನೆ. ನಾನು ಫೋನ್ ಮಾಡಿ ಮಾತನಾಡಿದ್ದು ಹೌದು. ಆದರೆ, ನಾನು ಕೊಲೆ ಮಾಡಿ ಎಂದು ಮಾತನಾಡಿದ್ದೇನಾ? ನಾನು ಮಾತನಾಡಿರುವ ರೆಕಾರ್ಡ್ ಅವರ ಬಳಿಯೇ ಇದೆ. ಅದರಲ್ಲಿ ಏನಿದೆ ಎಂಬುದು ಪೊಲೀಸರಿಗೆ ಗೊತ್ತಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
"ನಾನು ಯಾಕೆ ವಿಚಾರಣೆಗೆ ಹಾಜರಾಗಬೇಕು? ನನಗೆ ಸಮಯ ನೀಡಲು ಅವರ್ಯಾರು?" ಎಂದು ಡಾ.ಭಟ್ ಪೊಲೀಸರ ನೋಟೀಸ್ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೆಹಮಾನ್ ಹತ್ಯಾ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, “ನಾವ್ಯಾರೂ ಹತ್ಯೆಯನ್ನು ಸಮರ್ಥಿಸುವುದಿಲ್ಲ. ಆದರೆ ಪ್ರಕರಣದಲ್ಲಿ ಇಲ್ಲದವರ ಮೇಲೂ ಕೇಸ್ ದಾಖಲಿಸಲಾಗಿದೆ' ಎಂದು ಆರೋಪಿಸಿದ ಪ್ರಭಾಕರ ಭಟ್ ಅವರು ಕಾನೂನು ಬಿಟ್ಟು ಗೃಹ ಸಚಿವರು, ಮುಖ್ಯಮಂತ್ರಿಗಳು ಹೇಳುತ್ತಾರೆ ಎಂಬ ಕಾರಣಕ್ಕೆ ನಮ್ಮನ್ನು ದಮನ ಮಾಡಬಾರದು. ಅಧಿಕಾರಿಗಳು ಅವರ ಚೇಲಾಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ಆರೋಪಿಸಿದರು.