ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿರುದ್ಧ ಮೇಲ್ಮನವಿ ಪ್ರಾಥಮಿಕ ಹಂತದಲ್ಲೇ ವಜಾ
ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿರುದ್ಧ ರಂಜನ್ ರಾವ್ ಯಡೂರು ಸಲ್ಲಿಸಿದ್ದ ದೂರಿನ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಅವರ ಮೇಲ್ಮನವಿಯನ್ನು ಪ್ರಾಥಮಿಕ ಹಂತದಲ್ಲೇ ವಜಾಗೊಳಿಸಿದೆ ಎಂದು ಶ್ರೀಕ್ಷೇತ್ರ ಧ.ಗ್ರಾ. ಯೋಜನೆಯ ಪ್ರಕಟನೆ ತಿಳಿಸಿದೆ.
ಯೋಜನೆ ವಿರುದ್ಧ ವಿವಿಧ ಆರೋಪಗಳನ್ನು ಮಾಡಿ ರಂಜನ್ ರಾವ್ ಯಡೂರು ಅವರು ಬೆಳ್ತಂಗಡಿಯ ಪ್ರಥಮದರ್ಜೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಅವರು ಮೇಲ್ಮನವಿ ಸಲ್ಲಿಸಿದ್ದರು. ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಜನೆಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ಹೈಕೋರ್ಟ್, ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಸ್ವಸಹಾಯ ಸಂಘಗಳನ್ನು ರಚಿಸಿ, ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ಒದಗಿಸುವ ಕಾರ್ಯವನ್ನು ಆರ್ಥಿಕ ಸೇರ್ಪಡೆಯ ಭಾಗವಾಗಿ ನಡೆಸುತ್ತಿದೆ ಎಂಬ ಅಂಶವನ್ನು ಪರಿಗಣಿಸಿತ್ತು.
ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಟ್ರಸ್ಟ್‌ನ ಸಮಾಜಮುಖೀ ಕಾರ್ಯಗಳ ಯಶಸ್ಸನ್ನು ಸಹಿಸದೆ ದೂರುದಾರರು ದುರುದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಯೋಜನೆಯ ಪರವಾಗಿ ನ್ಯಾಯವಾದಿ ಪಿ. ಪಿ. ಹೆಗ್ಡೆ ವಾದಿಸಿದ್ದರು.
ವಾದ-ಪ್ರತಿವಾದಗಳನ್ನು ಪರಿಶೀಲಿಸಿದ ಹೈಕೋರ್ಟ್, ಗ್ರಾಮಾಭಿವೃದ್ಧಿ ಯೋಜನೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ರಂಜನ್ ರಾವ್ ಯಡೂರು ಅವರು 2026ರ ಎ. 23ರಂದು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ಸೆ.8ರಂದು ನಡೆಸಿದ ಸುಪ್ರೀಂ ಕೋರ್ಟ್, ದೂರುದಾರರ ಆರೋಪಗಳಿಗೆ ಸೂಕ್ತ ಆಧಾರವಿಲ್ಲ ಎಂಬುದನ್ನು ಪರಿಗಣಿಸಿ ಮೇಲ್ಮನವಿಯನ್ನು ವಜಾಗೊಳಿಸಿದೆ ಎಂದು ಯೋಜನೆ ಪ್ರಕಟನೆಯಲ್ಲಿ ತಿಳಿಸಿದೆ.