ಕೊಬ್ಬರಿ ಸಂಸ್ಕರಣಾ ಘಟಕದಲ್ಲಿ ಬೆಂಕಿ ಅನಾಹುತ
ಕಾಪು: ಸುಭಾಷ್ ನಗರದಲ್ಲಿರುವ ಕೊಬ್ಬರಿ ಸಂಸ್ಕರಣಾ ಘಟಕವೊಂದರಲ್ಲಿ ಶನಿವಾರ ಬೆಳಗಿನ ಜಾವ ಆಕಸ್ಮಿಕವಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಕೊಬ್ಬರಿ ದಾಸ್ತಾನು ಸುಟ್ಟು ಭಸ್ಮವಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು, ಕ್ಷಣಾರ್ಧದಲ್ಲೇ ಘಟಕದಲ್ಲಿದ್ದ ಒಣ ಕೊಬ್ಬರಿ ದಾಸ್ತಾನಿಗೆ ಬೆಂಕಿ ವ್ಯಾಪಿಸಿ ಉರಿದು ಭಸ್ಮವಾಗಿದೆ. ಹಲವು ವರ್ಷಗಳಿಂದ ಈ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ನಳಿನಿ ಪುಷ್ಪಲತಾ ಸಾಲಿಯಾನ್ಸ್ ಎಂಬವರಿಗೆ ಸೇರಿದ ಕೊಬ್ಬರಿ ಸಂಸ್ಕರಣಾ ಘಟಕ ಇದಾಗಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಉಡುಪಿಯಿಂದ ಅಗ್ನಿಶಾಮಕ ದಳದ ಎರಡು ವಾಹನಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದಾಗಿ ಬೆಂಕಿ ಸುತ್ತಮುತ್ತಲಿನ ಪ್ರದೇಶಗಳಿಗೆ ವ್ಯಾಪಿಸುವುದು ತಪ್ಪಿದೆ. ಘಟಕದಲ್ಲಿದ್ದ ಅಪಾರ ಪ್ರಮಾಣದ ಕೊಬ್ಬರಿ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಿಖರ ನಷ್ಟದ ಪ್ರಮಾಣ ಹಾಗೂ ತಾಂತ್ರಿಕ ಕಾರಣಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.