ತುಳು ಭಾಷೆಗೆ ಸ್ಥಾನಮಾನ ದೊರೆತಿರುವುದು ಸಂತಸದ ಸಂಗತಿ: ರಮೇಶ್ ಶೆಟ್ಟಿ ಬೋಳಿಯಾರ್

ತುಳು ಭಾಷೆಗೆ ಸ್ಥಾನಮಾನ ದೊರೆತಿರುವುದು ಸಂತಸದ ಸಂಗತಿ: ರಮೇಶ್ ಶೆಟ್ಟಿ ಬೋಳಿಯಾರ್

ಉಳ್ಳಾಲ: ಹಲವು ವರ್ಷಗಳ ಹೋರಾಟ ಹಾಗೂ ಬೇಡಿಕೆಯ ಬಳಿಕ ತುಳು ಭಾಷೆಗೆ ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ದೊರೆತಿರುವುದು ಸಂತಸದ ಸಂಗತಿಯಾಗಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಜನತೆಯ ಬಹುದಿನಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಹೇಳಿದರು.

ಶನಿವಾರ ಉಳ್ಳಾಲ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಸರ್ಕಾರ ಅನುದಾನ ಮಂಜೂರು ಮಾಡಿದೆ. ಕೊಂಡಾಣ ದೈವಸ್ಥಾನ, ಒಡಿಯೂರು ಶ್ರೀ ಕ್ಷೇತ್ರ, ಶ್ರೀಧಾಮ ಮಾಣಿಲ ಕ್ಷೇತ್ರ, ಶಾಂತಿ ಟ್ರಸ್ಟ್ ಬಬ್ಬುಕಟ್ಟೆ ಹಾಗೂ ಸಯ್ಯಿದ್ ಮದನಿ ಮಸೀದಿಗೆ ತಲಾ ಒಂದು ಕೋಟಿ ಅನುದಾನ ಮಂಜೂರಾಗಿದೆ ಎಂದು ಅವರು ತಿಳಿಸಿದರು.

ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗೂ ಅನುದಾನ ನೀಡಲಾಗಿದ್ದು, ಕೋಡಿಯಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಾಣಕ್ಕೆ 13 ಕೋಟಿ ರೂ.ಮಂಜೂರು ಮಾಡಲಾಗಿದೆ. 

ಅಬ್ಬಕ್ಕ ಸರ್ಕಲ್‌ನಿಂದ ಕೋಟೆಪುರದವರೆಗಿನ ರಸ್ತೆ ಅಭಿವೃದ್ಧಿಗೆ 6 ಕೋಟಿ ರೂ.ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಗುದ್ದಲಿ ಪೂಜೆ ನಡೆಯಲಿದೆ. ಸಿ ರೋಡ್ ರಸ್ತೆಯ ಅಭಿವೃದ್ಧಿಗೆ 4 ಕೋಟಿ ರೂ.ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾಮಗಾರಿ ಆರಂಭಿಸಲು ಅನುಮೋದನೆ ದೊರೆತಿದ್ದು, ಡಾಂಬರೀಕರಣ ಕಾಮಗಾರಿ ಅಕ್ಟೋಬರ್ವರೆಗೆ ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದೆ ಎಂದು ಹೇಳಿದರು.

ಓವರ್‌ಬ್ರಿಡ್ಜ್ ಸಮೀಪದ ಕಾಮಗಾರಿಗೆ 33 ಕೋಟಿ ರೂ. ಹಾಗೂ ರೈಲ್ವೆ ಸಂಬಂಧಿತ ಕಾಮಗಾರಿಗಳಿಗೆ ರೂ. ಮೂರು ಕೋಟಿ ಅನುದಾನ ಮಂಜೂರಾಗಿದೆ. ಈ ಕಾಮಗಾರಿಗಳಿಗೆ ಸಂಬಂಧಿಸಿದ ಅಗತ್ಯ ಕ್ರಮಗಳು ನಡೆಯುತ್ತಿವೆ ಎಂದರು.

ಚೆಂಬುಗುಡ್ಡೆಯಲ್ಲಿ ಸುಮಾರು 94 ಕೋಟಿ ರೂ. ವೆಚ್ಚದಲ್ಲಿ 110 ಕೆವಿ ವಿದ್ಯುತ್ ಉಪಕೇಂದ್ರ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಈಗಾಗಲೇ 33 ಕೆವಿ ವಿದ್ಯುತ್ ಉಪಕೇಂದ್ರವಿದ್ದು, ಇದೀಗ 110 ಕೆವಿ ಉಪಕೇಂದ್ರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ ಅಂಡರ್ಗ್ರೌಂಡ್ ಕೇಬಲ್ ಕಾಮಗಾರಿಯನ್ನೂ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ರಮೇಶ್ ಶೆಟ್ಟಿ ಬೋಳಿಯಾರ್ ಹೇಳಿದರು.

ಎಲ್ಲ ಕಾಮಗಾರಿಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ವೇಗವಾಗಿ ಪೂರ್ಣಗೊಳಿಸಿ, ಸಾಧ್ಯವಾದಷ್ಟು ಶೀಘ್ರದಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.

ಕಾಂಗ್ರೆಸ್ ವಕ್ತಾರ ದಿನೇಶ್ ಕುಂಪಲ  ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಮಿತಾ ಆಶ್ವಿನ್, ಕಾಂಗ್ರೆಸ್ ಮುಖಂಡರಾದ ಸಜೀದ್ ಹಾಗೂ ರಿಚರ್ಡ್ ಧರ್ಮನಗರ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article