ಅಕ್ರಮ-ಸಕ್ರಮ ಮಂಜೂರಾತಿಯಲ್ಲಿ ಲೋಪ: ಕಂದಾಯ ಅಧಿಕಾರಿಗಳಿಗೆ ದಂಡನೆ

ಅಕ್ರಮ-ಸಕ್ರಮ ಮಂಜೂರಾತಿಯಲ್ಲಿ ಲೋಪ: ಕಂದಾಯ ಅಧಿಕಾರಿಗಳಿಗೆ ದಂಡನೆ

ಕುಂದಾಪುರ: ತಾಲೂಕಿನ ಬೇಳೂರು ಗ್ರಾಮದ ಸರ್ಕಾರಿ ಜಮೀನಿಗೆ ಸಂಬಂಧಿಸಿದ ಅಕ್ರಮ-ಸಕ್ರಮ ಮಂಜೂರಾತಿ ಕಡತದಲ್ಲಿ ನಿಯಮ ಉಲ್ಲಂಘನೆ ಹಾಗೂ ಕರ್ತವ್ಯಲೋಪ ಎಸಗಿರುವ ಆರೋಪಗಳು ಇಲಾಖಾ ವಿಚಾರಣೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಕಂದಾಯ ಅಧಿಕಾರಿಗಳಿಗೆ ಕರ್ನಾಟಕ ಸರ್ಕಾರ ದಂಡನೆ ವಿಧಿಸಿ ಅಂತಿಮ ಆದೇಶ ಹೊರಡಿಸಿದೆ.

ಬೇಳೂರು ಗ್ರಾಮದ ಸರ್ಕಾರಿ ಸರ್ವೆ ನಂಬರ್ 292ಕ್ಕೆ ಸಂಬಂಧಿಸಿದ ಸುಮಾರು 3 ಎಕರೆ ಜಮೀನಿನ ಅಕ್ರಮ-ಸಕ್ರಮ ಅರ್ಜಿಗೆ ಸಂಬಂಧಿಸಿ ನಡೆದ ಕಾನೂನು ಹೋರಾಟದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಲಭ್ಯ ದಾಖಲೆಗಳ ಪ್ರಕಾರ, ಅಕ್ಕಯ್ಯ ಯಾನೆ ಅನಿತಾ ಶೆಟ್ಟಿ ಅವರು 1999ರಲ್ಲಿ ಎನ್‌ಸಿಆರ್/ಸಿಆರ್ 24824/4-99ರಂತೆ ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸುವ ಮೊದಲೇ ಗ್ರಾಮದ ಖಾತಾ ರಿಜಿಸ್ಟರ್ ಪುಸ್ತಕದಲ್ಲಿರುವಂತೆ ಬೇಳೂರು ಗ್ರಾಮದ ಅಕ್ಕಯ್ಯ ಯಾನೆ ಅನಿತಾ ಶೆಟ್ಟಿ ಇವರಿಗೆ ಸುಮಾರು 15 ಎಕರೆ ಭೂಮಿ ಇರುವುದು ದಾಖಲೆಗಳಿಂದ ತಿಳಿದುಬಂದಿರುತ್ತದೆ. ಇವರ ಪತಿ  ಜಿ.ಕರುಣಾಕರ ಶೆಟ್ಟಿ, ಮಗ ಚಿತ್ತರಂಜನ್ ಶೆಟ್ಟಿ, ಮಗಳು ರುಷಿತಾ ಹಾಗೂ ತಾಯಿ ರುಕ್ಕಿಣಿ ಶೆಡ್ತಿಯವರ ಆಸ್ತಿ ಸೇರಿಸಿದರೆ ಹೆಚ್ಚು ಆಸ್ತಿ ಹೊಂದಿದವರಾಗಿರುತ್ತಾರೆ. 

ಅಕ್ರಮ ಸಕ್ರಮ ಅರ್ಜಿ ಸಲ್ಲಿಸಿರುವ ಸ್ಥಳವು ಸುಮಾರು 3 ಎಕರೆ ದಾಟಿದ್ದು, ಇದರಲ್ಲಿ ದೊಡ್ಡ ದೊಡ್ಡ ಬೋಗಿ ಮರಗಳು ಇದ್ದು ಯಾವುದೇ ಕೃಷಿ ಮಾಡಿರುವುದಿಲ್ಲ. ಕನಿಷ್ಠ 5 ರಿಂದ 20 ವರ್ಷದಿಂದ ಕೃಷಿ ಮಾಡದೇ ಇರುವ ಸ್ಥಳದ ಕುರಿತಾಗಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕೃತಗೊಳಿಸದೇ, ಅಧಿಕಾರಿಗಳು ಅಕ್ಕಯ್ಯ ಯಾನೆ ಅನಿತಾ ಶೆಡ್ತಿಯವರಿಂದ ಲಂಚ ಪಡೆದು ವಿಶೇಷ ಆಸಕ್ತಿ ವಹಿಸಿ ಅಕ್ರಮ ಸಕ್ರಮ ಸಮಿತಿಗೆ ಸುಳ್ಳು ಮಾಹಿತಿ ನೀಡಿರುತ್ತಾರೆ. ಅರ್ಜಿ ಸಲ್ಲಿಸುವ ಮೊದಲೇ 15 ಎಕರೆಗಿಂತ ಹೆಚ್ಚು ಭೂಮಿ ಇರುವುದನ್ನು ಕಡತದಲ್ಲಿ ಕಾಣಿಸಿರುವುದಿಲ್ಲ!

ಪ್ರಕರಣಕ್ಕೆ ಸಂಬಂಧಿಸಿದಂತೆ ಕಡತದಲ್ಲಿ ಅಗತ್ಯ ಮಾಹಿತಿಯನ್ನು ಸಂಪೂರ್ಣವಾಗಿ ದಾಖಲಿಸದೇ, ಅಕ್ರಮ-ಸಕ್ರಮ ಸಮಿತಿಯ ಮುಂದೆ ತಪ್ಪು ಅಥವಾ ಅಪೂರ್ಣ ಮಾಹಿತಿ ಮಂಡಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಸಾರ್ವಜನಿಕರಿಂದ ಲಿಖಿತ ಆಕ್ಷೇಪಣೆ ಬಂದ ಬಳಿಕವೂ ಪ್ರಕರಣಕ್ಕೆ ಸಂಬಂಧಿಸಿದ ಕಡತವನ್ನು ಮರುಪರಿಶೀಲಿಸಿ, ನಿಯಮ ಉಲ್ಲಂಘಿಸಿ ಸಮಿತಿಯ ಮುಂದೆ ಮಂಡಿಸಿ ತಾತ್ಕಾಲಿಕ ಮಂಜೂರಾತಿ ಪಡೆಯಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಈ ಕುರಿತು ಬೇಳೂರು ಗ್ರಾಮದ ಮಧುಕರ ಶೆಟ್ಟಿ ಅವರು ವಕೀಲರ ಕಾನೂನು ಸಲಹೆಯ ಮೇರೆಗೆ ಕರ್ನಾಟಕ ಲೋಕಾಯುಕ್ತಕ್ಕೆ MYS/9234/2017 ಸಂಖ್ಯೆಯಡಿ ಲಿಖಿತ ದೂರು ಸಲ್ಲಿಸಿದ್ದರು. 

ದೂರು, ಸಾಕ್ಷಿ ಹೇಳಿಕೆಗಳು ಹಾಗೂ ದಾಖಲೆಗಳ ಪರಿಶೀಲನೆಯ ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಖಾಯಂ ಮಂಜೂರಾತಿ ಪ್ರಕ್ರಿಯೆಗೆ ತಡೆ ನೀಡಲಾಗಿತ್ತು. ಅಲ್ಲದೆ, ಅಂದಿನ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿತ್ತು.

ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣಿಂದ್ರ ಅವರು ಲಭ್ಯ ದಾಖಲೆಗಳು, ಸಾಕ್ಷ್ಯಗಳು ಹಾಗೂ ವಿಚಾರಣೆಯ ಮಾಹಿತಿಯನ್ನು ಪರಿಶೀಲಿಸಿದ ಬಳಿಕ ಸಂಬಂಧಪಟ್ಟ ಸರ್ಕಾರಿ ನೌಕರರ ವಿರುದ್ಧ ದೂಷರೋಪಣಾ ಪಟ್ಟಿ ಸಲ್ಲಿಸಿ ಇಲಾಖಾ ವಿಚಾರಣೆ ನಡೆಸುವಂತೆ 2022ರ ಡಿಸೆಂಬರ್ 8ರಂದು ಆದೇಶಿಸಿದ್ದರು ಎಂದು ತಿಳಿದುಬಂದಿದೆ.

ಲೋಕಾಯುಕ್ತದ ಆದೇಶದ ಮೇರೆಗೆ ನಡೆದ ಇಲಾಖಾ ವಿಚಾರಣೆಯಲ್ಲಿ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು 2026ರ ಮಾರ್ಚ್ 5ರಂದು ಅಂತಿಮ ಆದೇಶ ಹೊರಡಿಸಿ ದಂಡನೆ ವಿಧಿಸಿದೆ.

ಆದೇಶದಂತೆ ಬೇಳೂರು ಗ್ರಾಮದ ಅಂದಿನ ಗ್ರಾಮ ಆಡಳಿತ ಅಧಿಕಾರಿ ಹಾಗೂ ಹಾಲಿ ನಿವೃತ್ತರಾಗಿರುವ ಲಕ್ಷ್ಮೀನಾರಾಯಣ ಭಟ್ ಅವರ ನಿವೃತ್ತಿ ವೇತನದಲ್ಲಿ ಶೇಕಡಾ 5ರಷ್ಟನ್ನು ಶಾಶ್ವತವಾಗಿ ತಡೆಹಿಡಿಯುವ ದಂಡನೆ ವಿಧಿಸಲಾಗಿದೆ. 

ಇನ್ನೋರ್ವ ಆರೋಪಿಯಾದ ಗ್ರಾಮ ಆಡಳಿತ ಅಧಿಕಾರಿ ಪ್ರದೀಪ್ ಅವರಿಗೆ ಮುಂದಿನ ಐದು ವಾರ್ಷಿಕ ವೇತನ ಬಡ್ತಿಗಳನ್ನು ಸಂಚಿತ ಪರಿಣಾಮದೊಂದಿಗೆ ತಡೆಹಿಡಿಯುವ ದಂಡನೆ ವಿಧಿಸಲಾಗಿದೆ.

ಪ್ರಕರಣದ ಮೂರನೇ ಆರೋಪಿಯಾಗಿದ್ದ ಅಂದಿನ ಕಂದಾಯ ನಿರೀಕ್ಷಕ ನರಸಿಂಹ ಕಾಮತ್ ಅವರು 2021ರ ಡಿಸೆಂಬರ್ 16ರಂದು ಮೃತಪಟ್ಟ ಹಿನ್ನೆಲೆಯಲ್ಲಿ ಅವರ ವಿರುದ್ಧದ ಇಲಾಖಾ ವಿಚಾರಣೆಯನ್ನು ಅಂತ್ಯಗೊಳಿಸಿ  ಆದೇಶಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article