ಕಾರಾಗೃಹಕ್ಕೆ ಪೊಲೀಸರರ ದಿಢೀರ್ ದಾಳಿ: 10 ಮೊಬೈಲ್ ವಶ
ಮಂಗಳೂರು: ನಗರದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ಈ ವೇಳೆ ಮೊಬೈಲ್‌ಫೋನ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನ್ಯಾಯಾಂಗ ಬಂಧನದಲ್ಲಿರುವ ಕೈದಿಗಳು ಅಕ್ರಮವಾಗಿ ನಿಷೇಧಿತ ಮೊಬೈಲ್ ಫೋನ್‌ಗಳನ್ನು ಬಳಸುತ್ತಿರುವ ಕುರಿತು ಬಂದ ಖಚಿತ ಮಾಹಿತಿ ಮೇರೆಗೆ ಮಂಗಳೂರು ನಗರ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ 9 ಮಂದಿ ಕೈದಿಗಳಿಂದ ಒಟ್ಟು 10 ಸ್ಮಾರ್ಟ್‌ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ದಿನಾಂಕ 08-09-2026ರ ರಾತ್ರಿ ಬರ್ಕೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 82/2026, ಕಲಂ 323 ಬಿಎನ್‌ಎಸ್ ಹಾಗೂ ಕಲಂ 42 ಕರ್ನಾಟಕ ಕಾರಾಗೃಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣವೊಂದರ ತನಿಖೆಯ ಭಾಗವಾಗಿ ಜೈಲಿನ ’ಎ-ಬ್ಲಾಕ್’ ಮೇಲೆ ದಿಢೀರ್ ದಾಳಿ ನಡೆಸಿ ಕೂಲಂಕಷ ತಪಾಸಣೆ ನಡೆಸಿದಾಗ ಮೊಬೈಲ್‌ಬಳಕೆ ಮಾಡುತ್ತಿರುವುದು ಗೊತ್ತಾಗಿದೆ.
ರಿಫತ್ ಅಲಿ, ಇಬ್ರಾಹಿಂ ಖಲೀಲ್, ಅಸ್ಫಕ್ ಅಲಿಯಾಸ್ ಜುಟ್ಟು ಅಸ್ಫಕ್, ಅರ್ಷದ್, ದಾವುದ್ ಫರ್ವೇಜ್, ನಝರತ್ ಅಲಿ, ಶಿಫಾನ್, ಅಬ್ದುಲ್ ಸಾದೀಕ್, ಅರ್ಫಜ್ ಮೊಬೈಲ್‌ಬಳಕೆ ಮಾಡುತ್ತಿರುವುದು ಗೊತ್ತಾಗಿದ್ದು. ಪೊಲೀಸರು ಇವರಿಂದ ಮೊಬೈಲ್ ಜಪ್ತಿ ಮಾಡಿಕೊಂಡಿದ್ದಾರೆ.
ಮೊಬೈಲ್ ಹೊಂದಿದ್ದ ಆರೋಪಿಗಳ ಪೈಕಿ ರಿಫತ್ ಅಲಿ, ಇಬ್ರಾಹಿಂ ಖಲೀಲ್, ಅಸ್ಫಕ್ ಅಲಿಯಾಸ್ ಜುಟ್ಟು ಅಸ್ಫಕ್ ಮತ್ತು ಅರ್ಷದ್ ಇತ್ತೀಚೆಗೆ ತೊಕ್ಕೊಟ್ಟು ಬಳಿ ನಡೆದ ಅರೀಫ್ ಕೊಲೆ ಪ್ರಕರಣದ ಮುಖ್ಯ ಆರೋಪಿಗಳಾಗಿದ್ದಾರೆ.
ದಾವುದ್ ಫರ್ವೇಜ್, ನಝರತ್ ಅಲಿ, ಶಿಫಾನ್, ಅಬ್ದುಲ್ ಸಾದೀಕ್ ಎನ್ನುವ ಕೈದಿಗಳು ಎನ್‌ಡಿಪಿಎಸ್ (ಮಾದಕ ದ್ರವ್ಯ ಜಾಲ) ಪ್ರಕರಣದ ಡ್ರಗ್ ಪೆಡ್ಲರ್‌ಗಳಾಗಿದ್ದು, 9ನೇ ಕೈದಿ ಅರ್ಫಜ್ ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾದ ’ಕೋಕಾ’ (KOCA) ಪ್ರಕರಣದ ಆರೋಪಿಯಾಗಿದ್ದಾನೆ.
ಕಾರಾಗೃಹದೊಳಗೆ ಈ ಮೊಬೈಲ್ ಫೋನ್‌ಗಳು ಹೇಗೆ ಸರಬರಾಜಾದವು ಮತ್ತು ಇವುಗಳನ್ನು ಯಾವುದಕ್ಕಾಗಿ ಬಳಕೆ ಮಾಡಲಾಗುತ್ತಿತ್ತು ಎಂಬುದರ ಕುರಿತು ಬರ್ಕೆ ಪೊಲೀಸ್ ಠಾಣೆಯ ಅಧಿಕಾರಿಗಳು ಸುದೀರ್ಘ ತನಿಖೆ ಮುಂದುವರಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.