ಡಿಸಿ ಮನ್ನಾ ಭೂಮಿ ಹಂಚಿಕೆ: ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರಕ್ಕೆ ಆಗ್ರಹ
ಮಂಗಳೂರು: ಪರಿಶಿಷ್ಟ ಸಮುದಾಯಕ್ಕೆ ಮೀಸಲಿಟ್ಟಿರುವ ಡಿ.ಸಿ. ಮನ್ನಾ ಭೂಮಿ ಹಂಚಿಕೆಗೆ ಸಂಬಂಧಿಸಿ ಮಂಗಳೂರಿನಲ್ಲಿ ಸೆ.18ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಒಂದು ತಿಂಗಳೊಳಗೆ ಹಂಚಿಕೆ ಪ್ರಕ್ರಿಯೆ ಪ್ರಾರಂಭಿಸಿದ್ದಲ್ಲಿ ಜಿಲ್ಲೆಯಾದ್ಯಂತ ವಿವಿಧ ಹಂತಗಳಲ್ಲಿ ಹೋರಾಟ ತೀವ್ರ ಗೊಳಿಸಲಾಗುವುದು ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಹೇಳಿದೆ.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಉಪ ಪ್ರಧಾನ ಸಂಚಾಲಕ ರಘು ಕೆ. ಎಕ್ಕಾರು, ’ಡಿ.ಸಿ. ಮನ್ನಾ ಭೂಮಿ ಹಂಚಿಕೆಗೆ ಸಂಬಂಧಿಸಿ ಜಿಲ್ಲಾಡಳಿತವು 2017ರಲ್ಲಿ ಸರ್ಕಾರಕ್ಕೆ ಡ್ರಾಫ್ಟ್ ರೂಲ್ಸ್ ಕಳುಹಿಸಿತ್ತು. ಒಂಬತ್ತು ವರ್ಷ ಕಳೆದರೂ ಈವರೆಗೆ ಭೂ ಮಂಜೂರಾತಿ ನಿಯಮಕ್ಕೆ ತಿದ್ದುಪಡಿ ತಂದು ಸಮಸ್ಯೆ ನಿವಾರಿಸುವ ಪ್ರಯತ್ನ ಯಾವುದೇ ಪಕ್ಷದ ಸರ್ಕಾರ ಆಡಳಿತಕ್ಕೆ ಬಂದರೂ ಆಗಿಲ್ಲ. ಜನಪ್ರತಿನಿಧಿಗಳು, ಸಚಿವರು ಕೇವಲ ಭರವಸೆ ನೀಡುತ್ತ ಬಂದಿದ್ದಾರೆ’ ಎಂದರು.
ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದವರು 5,590 ಮಂದಿ ಇದ್ದಾರೆ. ಅರ್ಹ ಕುಟುಂಬ ಗುರುತಿಸಿ, ಗ್ರಾಮೀಣ ಪ್ರದೇಶದಲ್ಲಿ 2 ಎಕರೆ, ನಗರದಲ್ಲಿ 10 ಸೆಂಟ್ಸ್ ಜಮೀನು ಮಂಜೂರು ಮಾಡಬೇಕು. ಡಿ.ಸಿ. ಮನ್ನಾ ಭೂಮಿಯ ಒತ್ತುವರಿ ತೆರವುಗೊಳಿಸಲು ಕಾರ್ಯಪಡೆ ರಚಿಸಬೇಕು, ಆ ಸಮಿತಿಗೆ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡರನ್ನು ಸೇರ್ಪಡೆಗೊಳಿಸಬೇಕು. 2017ರಲ್ಲಿ ಕಂದಾಯ ಅಧಿಕಾರಿಗಳು ನಡೆಸಿದ ಸರ್ವೆ ವರದಿಯಲ್ಲಿ ತಪ್ಪುಗಳಿದ್ದು, ಪುನಃ ವರದಿ ತಯಾರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಡಳಿತದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 8,509 ಎಕರೆ ಡಿ.ಸಿ. ಮನ್ನಾ ಭೂಮಿ ಇದೆ. 7,366 ಎಕರೆ ಹಂಚಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿರುವುದು ತಪ್ಪು ಮಾಹಿತಿಯಾಗಿದೆ. ಕ್ರಮಬದ್ಧವಾಗಿ ಹಂಚಿಕೆ ಆಗಿದ್ದರೆ ದಾಖಲೆ ಬಿಡುಗಡೆಗೊಳಿಸಲಿ. ಬೆಳ್ತಂಗಡಿ, ಮೂಡುಬಿದಿರೆ, ಉಜಿರೆ ಭಾಗದಲ್ಲಿ ಡಿ.ಸಿ. ಮನ್ನಾ ಭೂಮಿಯನ್ನು ಬಲಿಷ್ಠರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಬೇಕು ಎಂದರು.
ಸಂಘಟನೆಯ ಪ್ರಧಾನ ಸಂಚಾಲಕ ರಮೇಶ್ ಕೋಟ್ಯಾನ್ ಮಾತನಾಡಿ, ಮಂಗಳೂರಲ್ಲಿ ಎಲ್ಲ ವೃತ್ತಗಳ ನಿರ್ಮಾಣವಾದರೂ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಈವರೆಗೂ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಆಗಿಲ್ಲ. ವಿನಾಕಾರಣ ವಿಳಂಬವಾಗುತ್ತಿದ್ದು, ಈ ವೃತ್ತ ನಿರ್ಮಾಣಕ್ಕೆ ಶೀಘ್ರ ಚಾಲನೆ ನೀಡದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಸಂಘಟನೆಯ ಆನಂದ ಬೆಳ್ಳಾರೆ, ಗಿರೀಶ್ ಕುಮಾರ್, ಸರೋಜಿನಿ ಬಂಟ್ವಾಳ, ಎಸ್.ಪಿ. ಆನಂದ, ಜಗದೀಶ್ ಪಾಂಡೇಶ್ವರ ಉಪಸ್ಥಿತರಿದ್ದರು.