ಮಂಗಳೂರು ಒಳಚರಂಡಿ ವ್ಯವಸ್ಥೆ ಮೇಲ್ದರ್ಜೆಗೆ 1250 ಕೋಟಿ ರೂ.ಗಳ ಪ್ರಸ್ತಾವನೆ: ಪ್ರಥಮ ಹಂತದ ಕಾಮಗಾರಿಗೆ 350 ಕೋಟಿ ಅನುಮೋದನೆ
ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆದ ಮನಪಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು ನಗರದ ಒಳಚರಂಡಿ ವ್ಯವಸ್ಥೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಆರಂಭಿಕ 350 ಕೋಟಿ ರೂ.ಗಳ ಕಾಮಗಾರಿಗೆ ಸ್ಥಳದಲ್ಲಿಯೇ ಮಂಜೂರಾತಿ ನೀಡಿದರು. ಸಚಿವ ಸಂಪುಟ ಸಭೆಯಲ್ಲಿ ಈ ಕಡತ ಮಂಡಿಸಲಾಗುವುದು. ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದಲ್ಲಿ ಹಣ ಬಿಡುಗಡೆಯಾಗಿ ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಇದೇ ವೇಳೆ ಜಲಸಿರಿ ಯೋಜನೆಯಡಿ 24*7 ನೀರು ಪೂರೈಕೆಗೆ ಸಂಬಂಧಿಸಿ ಮಂಗಳೂರಿನ 60 ಕೋಟಿರೂ. ಹಾಗೂ ಪುತ್ತೂರು, ಕುಂದಾಪುರಕ್ಕೆ ಒಟ್ಟು 160 ಕೋಟಿ ರೂ.ಗಳ ಬೇಡಿಕೆಯನ್ನು ಸಚಿವ ಸಂಪುಟಕ್ಕೆ ಸಲ್ಲಿಸಲಾಗಿದೆ. ಹಣ ಹೊಂದಿಸಲು ನಿಬಂಧನೆಗಳನ್ನು ಸಡಿಲಿಕೆ ಮಾಡಲು ಪ್ರಸ್ತಾವನೆ ಮಾಡಲಾಗಿದ್ದು, ಸಂಪುಟ ಸಭೆಯಲ್ಲಿ ಅದು ಕೂಡಾ ಮಂಜೂರಾತಿ ಆಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಜಲಸಿರಿ ಕಾಮಗಾರಿ ಪ್ರಸ್ತಾಪ ಆಗಬಾರದು:
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು, ಮಂಗಳೂರು ನಗರದ ಜಲಸಿರಿ ಕಾಮಗಾರಿ ವಿಳಂಬ, ಅಲ್ಲಲ್ಲಿ ರಸ್ತೆ ಅಗೆತ ಮಾಡುತ್ತಿರುವುದರಿಂದ ಸಾರ್ವಜನಿಕರಿಕೆ ಆಗುತ್ತಿರುವ ತೊಂದರೆ ಬಗ್ಗೆ ಸಚಿವರ ಗಮನಕ್ಕೆ ತಂದರು.
ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಿ ಈಗಾಗಲೇ 52.45 ಕಿ.ಮೀ. ವ್ಯಾಪ್ತಿಯ ಮುಖ್ಯ ಕೊಳವೆ ಅಳವಡಿಕೆಯಡಿ 7.45 ಕಿ.ಮೀ. ಬಾಕಿ ಇರುವುದಾಗಿ, 1191 ಕಿ.ಮೀ. ವ್ಯಾಪ್ತಿಯ ವಿತರಣಾ ಜಾಲದಡಿ 303 ಕಿ.ಮೀ. ಬಾಕಿ ಹಾಗೂ 96300 ಮನೆಗಳಿಗೆ ನಳ ಸಂಪರ್ಕದಡಿ 57118 ಸಂಪರ್ಕಗಳು ಬಾಕಿ ಇದ್ದು, 2027ರ ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದರು.
ಕಳೆದ ಆರು ವರ್ಷಗಳ ಅವಧಿಯಲ್ಲಿ ಮನೆಗಳಿಗೆ ನಳ ಸಂಪರ್ಕದ ಶೇ. 35ರಷ್ಟು ಕಾಮಗಾರಿ ಮಾತ್ರವೇ ಆಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಈಗಾಗಲೇ ನೀಡಲಾಗಿರುವ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಿ ನೀರು ಪೂರೈಕೆಗೆ ವ್ಯವಸ್ಥೆ ಮಾಡಬೇಕು. ಮುಂದಿನ ಸಭೆಗೆ ಮತ್ತೆ ಈ ವಿಷಯ ಪ್ರಸ್ತಾವ ಆಗಬಾರದು ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು
ಸಂಪೂರ್ಣ ಡಿಜಿಟೈಸೇಶನ್ ಆಗಿಲ್ಲ..
ಕರ್ನಾಟಕ ರಾಜ್ಯ ಸಾಫ್ಟ್ವೇರ್ನಲ್ಲಿ ಮುಂದಿದೆ. ಅದರಲ್ಲೂ ಸ್ಮಾರ್ಟ್ ಸಿಟಿ ಮಂಗಳೂರು ಮಹಾನಗರ ಪಾಲಿಕೆ ಆಡಳಿತ ಇನ್ನೂ ಸಂಪೂರ್ಣವಾಗಿ ಡಿಜಿಟೈಸೇಶನ್ ಆಗದಿರುವುದು ಶೇಮ್. ಈ ಬಗ್ಗೆ ಪಾಲಿಕೆ ಆಡಳಿತ ದಿಟ್ಟ ಕ್ರಮ ವಹಿಸಬೇಕು. ಪಾಲಿಕೆ ಸಂಪೂರ್ಣ ಡಿಜಿಟೈಸೇಶನ್ ಗೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಿದ ಸಚಿವರು, ಸಾರ್ವಜನಿಕರ ಅಹವಾಲುಗಳನ್ನು ಸರ್ಮಪವಾಗಿ ಆಲಿಸಬೇಕು. ಹಾಗೆಯ ಪಾಲಿಕೆಯಿಂದ ಆದ ಕಾಮಗಾರಿಗಳು ಸಾರ್ವಜನಿಕರಿಗೆ ತಿಳಿಯುವಂತಾಗಬೇಕು ಎಂದು ನಿರ್ದೇಶಿಸಿದರು.
ಪಾಲಿಕೆಯ ಮಾಜಿ ಕಾರ್ಪೊರೇಟರ್ ನವೀನ್ ಡಿಸೋಜಾ ಅವರು ಸಭೆಯಲ್ಲಿ ಪಾಲಿಕೆ ಸೌಲಭ್ಯಗಳು ಸಂಪೂರ್ಣ ಡಿಜಿಟೈಸೇಶನ್ಗೆ ಒತ್ತಾಯಿಸಿದ ಸಂದರ್ಭ ಸಚಿವರು ಈ ನಿರ್ದೇಶನ ನೀಡಿದರು.
ಮುಂದಿನ 25 ವರ್ಷಗಳ ಜನಸಂಖ್ಯೆಗೆ ಅನುಗುಣವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಲಭ್ಯತೆಗೆ ಅನುಗುಣವಾಗಿ ಸಂಗ್ರಹ ಸಾಮರ್ಥ್ಯ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸುವಂತೆಯೂ ಸಚಿವರು ಸಲಹೆ ನೀಡಿದರು.
ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು ಶೇ. 100ರಷ್ಟು ತ್ಯಾಜ್ಯ ನಿರ್ವಹಣೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಕ್ರಮ ಆಗಬೇಕು. ಮುಂದಿನ 25 ವರ್ಷಗಳ ತ್ಯಾಜ್ಯ ಸಂಗ್ರಹಕ್ಕೆ ಪೂರಕವಾಗಿ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶಿಸಿದರು.