ಮಾರುಕಟ್ಟೆಗಳು ಹಿರಿಯ ನಾಗರಿಕರು, ಸಾರ್ವಜನಿಕ ಸ್ನೇಹಿಯಾಗಿರಲಿ
ಹಲವು ಮಾರುಕಟ್ಟೆಗಳು ನಿರ್ಮಾಣ ಆಗಿ ಸಾಕಷ್ಟು ವರ್ಷಗಳಾಗದರೂ ಅಪೂರ್ಣ ವ್ಯವಸ್ಥೆಯಿಂದಾಗಿ ಸಾರ್ವಜನಿಕ ಬಳಕೆಗೆ ಸಿಗುತ್ತಿಲ್ಲ. ಮಾತ್ರವಲ್ಲದೆ, ಇದು ಸಾರ್ವಜನಿಕ ಹಾಗೂ ವ್ಯಾಪಾರಸ್ಥರಿಗೆ ಪೂರಕವಾಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಕಾರ್ಪೊರೇಟರ್ಗಳಾದ ನವೀನ್ ಡಿಸೋಜಾ ಹಾಗೂ ಲ್ಯಾನ್ಸಿಲೋಟ್ ಪಿಂಟೋ ಅವರು ತಿಳಿಸಿದಾಗ, ಸಚಿವರು ಪ್ರತಿಕ್ರಿಯಿಸಿ ಮುಂದೆ ನಿರ್ಮಾಣವಾಗುವ ಎಲ್ಲಾ ಮಾರುಕಟ್ಟೆಗಳು ಬೀದಿ ಬದಿ ವ್ಯಾಪಾರಿಗಳಿಗೆ, ಸಣ್ಣ ಮತ್ತು ಮದ್ಯಮ ವರ್ಗದ ವ್ಯಾಪಾರಿಗಳಿಗೆ ಪೂರಕವಾಗಿ ಹಾಗೂ ಸಾರ್ವಜನಿಕರ ಸ್ನೇಹಿಯಾಗಿ ನಿರ್ಮಾಣ ಮಾಡಲು ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ಪಾರಂಪರಿಕ ತ್ಯಾಜ್ಯ ನಿರ್ವಹಣೆ ಕ್ಷಿಪ್ರಗೊಳಿಸಲು ಸಲಹೆ
ಪಚ್ಚನಾಡಿಯ ಡಂಪಿಂಗ್ ಯಾರ್ಡ್ನಲ್ಲಿ 7 ಲಕ್ಷ ಟನ್ನಷ್ಟು ಇನ್ನೂ ಪಾರಂಪರಿಕ ತ್ಯಾಜ್ಯ ನಿರ್ವಹಣೆ ಬಾಕಿ ಇರುವ ವಿಷಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಯತೀಂದ್ರ, ರಾಜ್ಯದ ಹಲವು ಪಾಲಿಕೆಗಳಿಗೆ ಭೇಟಿ ನೀಡಿದ್ದು, ಮಂಗಳೂರಿನಲ್ಲಿಯೇ ಪಾರಂಪರಿಕ ತ್ಯಾಜ್ಯ ಇಷ್ಟೊಂದು ಪ್ರಮಾಣದಲ್ಲಿರುವುದು ಗಮನಕ್ಕೆ ಬಂದಿದೆ. ಅದರ ನಿರ್ವಹಣೆ ವೇಗವನ್ನು ಹೆಚ್ಚಿಸಬೇಕು. ಮಂಗಳೂರು ಪಾಲಿಕೆಯಲ್ಲಿಯೂ ದಾವಣಗೆರೆಯಂತೆಯೇ ಶೇ. 100ರಷ್ಟು ತ್ಯಾಜ್ಯ ನಿರ್ವಹಣೆಯನ್ನು ಖಾತರಿಪಡಿಸಬೇಕು. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಕೆಲಸಕ್ಕೆ ಪ್ರೋತ್ಸಾಹಿಸಬೇಕು. ವಾಹನಗಳು ತ್ಯಾಜ್ಯ ಸಂಗ್ರಹವನ್ನು ಸಮರ್ಪಕವಾಗಿ ನಿರ್ವಹಿಸುವುದನ್ನು ಖಾತರಿಗೊಳಿಸಲು ಜಿಪಿಎಸ್ ಅಳವಡಿಕೆ ಕಡ್ಡಾಯಗೊಳಿಸಬೇಕು ಎಂದು ಸಚಿವ ಯತೀಂದ್ರ ಸಿದ್ಧರಾಮಯ್ಯ ಪಾಲಿಕೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಶಾಸಕರಾದ ಡಾ. ಭರತ್ ಕುಮಾರ್ ಶೆಟ್ಟಿ, ಕಿಶೋರ್ ಕುಮಾರ್, ಪಿ.ವಿ. ಮೋಹನ್, ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕರಣ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಳ್ಳಾಲ್, ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಮೊದಲಾದವರಿದ್ದರು.