ಮೈಸೂರು ದಸರಾದಲ್ಲಿ ಅ.18, 19ರಂದು ಕರಾವಳಿ ಕಂಬಳ: ‘ವಿಜಯ- ದಶಮಿ’
ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳವನ್ನು ಆಯೋಜಿಸಲಾಗುತ್ತಿದ್ದು, ಮೈಸೂರಿನ ಸುಮಾರು 20 ಎಕರೆ ಪ್ರದೇಶದಲ್ಲಿ ಅ.18 ಮತ್ತು 19ರಂದು ‘ವಿಜಯ- ದಶಮಿ’ ಹೆಸರಿನ ಕರೆಯಲ್ಲಿ ಸರಕಾರದ ವತಿಯಿಂದ ಕಂಬಳ ನಡೆಯಲಿದೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಏಕಕಾಲದಲ್ಲಿ ಸುಮಾರು 15 ಸಾವಿರ ಮಂದಿ ಕಂಬಳ ವೀಕ್ಷಿಸಲು ಅನುಕೂಲವಾಗುವಂತೆ ಗ್ಯಾಲರಿ ನಿರ್ಮಾಣವಾಗುತ್ತಿದೆ ಎಂದರು.
ಕಂಬಳದ ಸಂದರ್ಭದಲ್ಲಿ ಮೂರು ವೇದಿಕೆಗಳನ್ನು ನಿರ್ಮಿಸಲಾಗುತ್ತಿದ್ದು, ಮುಖ್ಯ ವೇದಿಕೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ನಡೆಯಲಿವೆ. ಉಳಿದ ಎರಡು ವೇದಿಕೆಗಳಲ್ಲಿ ಗಣ್ಯರು ಹಾಗೂ ಅತಿಥಿಗಳಿಗಾಗಿ ವಿಶೇಷ ಆಸನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಬಳ ವೀಕ್ಷಿಸಲು ಅನುಕೂಲವಾಗುವಂತೆ ಪ್ರತಿದಿನ ಮೂರು ಅವಧಿಗಳಲ್ಲಿ ಪಾಸ್ ವ್ಯವಸ್ಥೆ ಮಾಡಲಾಗುತ್ತದೆ. ಮೂರು ಬ್ಯಾಚ್‌ಗಳಲ್ಲಿ ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಮೈಸೂರು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಹಾಗೂ ಕಂಬಳ ಸಮಿತಿಯ ಪ್ರಮುಖರು ಈಗಾಗಲೇ ಕರಾವಳಿ ಭಾಗಕ್ಕೆ ಭೇಟಿ ನೀಡಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರು, ಕೋಣಗಳ ಮಾಲೀಕರು ಹಾಗೂ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಿದ್ದಾರೆ. ಕೋಣಗಳ ಮಾಲೀಕರಿಗೆ ಆಹ್ವಾನ ನೀಡುವ ಕಾರ್ಯವೂ ನಡೆದಿದೆ ಎಂದು ಹೇಳಿದರು.
ಕೋಣಗಳ ಪ್ರಯಾಣಕ್ಕೆ ವಿಶೇಷ ವ್ಯವಸ್ಥೆ ..
ಕೋಣಗಳನ್ನು ಕರಾವಳಿಯಿಂದ ಮೈಸೂರಿಗೆ ಸುರಕ್ಷಿತವಾಗಿ ಕರೆದೊಯ್ಯಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅ. 16ರಂದು ಬೆಳಗ್ಗೆ 10.30ಕ್ಕೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಕೋಣಗಳೊಂದಿಗೆ ಪ್ರಯಾಣ ಆರಂಭಿಸಿ, ಮಡಿಕೇರಿಯಲ್ಲಿ ವಿರಾಮ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬಳಿಕ ಸಂಜೆ 4.30ರ ವೇಳೆಗೆ ಮೈಸೂರಿಗೆ ಪ್ರಯಾಣ ಮುಂದುವರಿಸಿ ರಾತ್ರಿ 9 ಗಂಟೆಯ ವೇಳೆಗೆ ತಲುಪುವಂತೆ ಯೋಜಿಸಲಾಗಿದೆ. ಮರುದಿನ ಅಂದರೆ ಅ. 17ರಂದು ಕೋಣಗಳಿಗೆ ಸಂಪೂರ್ಣ ವಿರಾಮ ದೊರೆಯಲಿದ್ದು, ಅ.18ರಂದು ಬೆಳಗ್ಗೆ ಕಂಬಳ ಉದ್ಘಾಟನಾ ಕಾರ್ಯಕ್ರಮ ಹಾಗೂ ಸಂಜೆ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ, 25 ಲಕ್ಷ ಮಂದಿ ವೀಕ್ಷಿಸುವ ನಿರೀಕ್ಷೆ ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ವೀಕ್ಷಿಸಲು ಸುಮಾರು 25 ಲಕ್ಷ ಮಂದಿ ಆಗಮಿಸಬೇಕು ಎಂಬುದು ಆಯೋಜಕರ ಆಶಯವಾಗಿ ಎಂದರು.
150ರಿಂದ 160 ಕೋಣಗಳ ಆಯ್ಕೆ..
ಕಂಬಳದಲ್ಲಿ ಭಾಗವಹಿಸುವ ಕೋಣಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಸುಮಾರು 150ರಿಂದ 160 ಕೋಣಗಳನ್ನು ಆಯ್ಕೆ ಮಾಡುವ ಉದ್ದೇಶವಿದೆ. ಆಯ್ಕೆಯಾದ ಕೋಣಗಳ ಮಾಲೀಕರ ಮನೆಗಳಿಗೆ ತೆರಳಿ ನೋಂದಣಿ ಮಾಡಿಸುವ ವ್ಯವಸ್ಥೆಯನ್ನೂ ರೂಪಿಸಲಾಗಿದೆ. ಕೋಣಗಳಿಗೆ ವಾಸ್ತವ್ಯ, ಆಹಾರ, ತಂಗುವ ಸ್ಥಳ, ನೀರು, ಶೌಚಾಲಯ ಹಾಗೂ ಸ್ನಾನಗೃಹ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗುತ್ತದೆ. ಕೋಣಗಳ ಸುರಕ್ಷತೆ ಮತ್ತು ಆರೈಕೆಗೆ ವಿಶೇಷ ಗಮನ ನೀಡಲಾಗುತ್ತದೆ ಎಂದು ಹೇಳಿದರು.
ಸುಮಾರು 48 ಗಂಟೆಗಳ ಕಂಬಳ ಇದಾಗಿದ್ದು, ಮೈಸೂರು ಅರಮನೆಯಿಂದ ಆರೇಳು ಕಿ.ಮೀ. ದೂರದ ವಿಶಾಲ ಪ್ರದೇಶದಲ್ಲಿ ಕಂಬಳ ಆಯೋಜನೆಯಾಗುತ್ತಿದೆ. ಯಾವುದೇ ಕಾರ್ಯಕ್ರಮ ಮಾಡುವಾಗ ಸಾಧಕ ಬಾಧಕಗಳಿರುತ್ತವೆ. ಸರಕಾರ ಎಲ್ಲವನ್ನೂ ಪರಿಶೀಲಿಸಿಕೊಂಡು ಕಂಬಳ ಆಯೋಜಿಸಿದೆ.
ದಸರಾ ಪ್ರಯುಕ್ತ ಯುವ ದಸರಾ ನಡೆಯುತ್ತದೆ. ಈ ಬಾರಿ ಏರ್ ಶೋ, ಪಾಶ್ಚಿಮಾತ್ಯ ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಲಾಗುತ್ತಿದೆ. ಅದರ ಜತೆಗೆ ಕಂಬಳ ನಮ್ಮ ಕರಾವಳಿ ಸಂಸ್ಕೃತಿಯ ಪ್ರತಿಬಿಂಬವಾಗಿ ನಡೆಯಲಿದ್ದು, ರಾಜಮನೆತನಕ್ಕೂ ಈ ಕಂಬಳದ ನಂಟಿದೆ. ಕೋಣಗಳಿಗೆ ಮೈಸೂರಿನ ವಾತಾವರಣ ಪ್ರಸಕ್ತವಾಗಿದೆ ಎಂದು ಹೇಳಿದರು.