ಮೈಸೂರು ದಸರಾ ಕಂಬಳದಲ್ಲಿ ಭಾಗವಹಿಸುವ ಕೋಣಗಳ ಮಾಲಕರಿಗೆ ಪ್ರೋತ್ಸಾಹ: ಶಾಸಕ ಅಶೋಕ್ ರೈ
ನಗರದಲ್ಲಿ ಇಂದು ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ದೊಡ್ಡ ಜೋಡಿ ಕೋಣಗಳಿಗೆ 65 ಸಾವಿರ ರೂ. ಹಾಗೂ ಸಣ್ಣ ಜೋಡಿ ಕೋಣಗಳಿಗೆ 50 ಸಾವಿರ ರೂ. ನೀಡುವ ವ್ಯವಸ್ಥೆ ಮಾಡಲಾಗಿದೆ. ಕೋಣಗಳ ಮಾಲೀಕರ ಬೇಡಿಕೆಯ ಹಿನ್ನೆಲೆಯಲ್ಲಿ ಬಹುಮಾನ ಹಾಗೂ ಪದಕಗಳ ಮೊತ್ತವನ್ನು ಹೆಚ್ಚಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಪ್ರಸಕ್ತ ಸೀನಿಯರ್ ವಿಭಾಗದಲ್ಲಿ ಪ್ರಥಮ 16 ಗ್ರಾಂ ದ್ವಿತೀಯ 8 ಗ್ರಾಂ ಚಿನ್ನದ ಬಹುಮಾನ ನೀಡಲಾಗುತ್ತಿತ್ತು. ಇದೀಗ ಕಂಬಳ ಮಾಲಕರು ತೃತೀಯ ಮತ್ತು ಚತುರ್ಥ ಬಹುಮಾನವಾಗಿಯೂ ತಲಾ 8 ಗ್ರಾಂ ಚಿನ್ನ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಜೂನಿಯರ್ ವಿಭಾಗದಲ್ಲಿ ಪ್ರಥಮ 8 ಗ್ರಾಂ ನೀಡುತ್ತಿದ್ದು, ಅದನ್ನು 16 ಗ್ರಾಂಗೆ ಹೆಚ್ಚಿಸಲು ದ್ವಿತೀಯ 5 ಗ್ರಾಂ ಚಿನ್ನವನ್ನೂ ಹೆಚ್ಚಳ ಮಾಡುವ ಜತೆಗೆ ತೃತೀಯ ಮತ್ತು ಚತುರ್ಥ ಬಹುಮಾನವಾಗಿಯೂ ಚಿನ್ನ ನೀಡಿ ಗೌರವಿಸುವಂತೆ ಕೋರಿದ್ದಾರೆ. ಈ ಬಗ್ಗೆ ಮೈಸೂರು ದಸರಾ ಸಮಿತಿ ನಿರ್ಧಾರ ಮಾಡಲಿದೆ ಎಂದು ತಿಳಿಸಿದರು.
ಭಾಗವಹಿಸುವ ಕೋಣಗಳ ಮಾಲೀಕರಿಗೆ ಮೈಸೂರು ದಸರಾ ಪ್ರಮಾಣಪತ್ರ, ಸ್ಮರಣಿಕೆ ಹಾಗೂ ವಿಶೇಷ ಗೌರವ ನೀಡಲು ನಿರ್ಧರಿಸಲಾಗಿದೆ. ಮಾಲೀಕರಿಗೆ ಗುರುತಿನ ಚೀಟಿ ಹಾಗೂ ಪಾಸ್ಗಳನ್ನೂ ವಿತರಿಸಲಾಗುತ್ತದೆ.
ಕಂಬಳದ ಜೊತೆಗೆ ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಆಹಾರ ಪದಾರ್ಥಗಳು ಹಾಗೂ ತುಳುನಾಡಿನ ಸಂಸ್ಕೃತಿಯನ್ನು ಮೈಸೂರು ದಸರಾ ಪ್ರವಾಸಿಗರಿಗೆ ಪರಿಚಯಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸುಮಾರು ನಾಲ್ಕರಿಂದ ಐದು ಎಕರೆ ಪ್ರದೇಶದಲ್ಲಿ ಆಹಾರ ಮತ್ತು ವಿವಿಧ ವಸ್ತುಗಳ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಕಂಬಳ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗುತ್ತಿದ್ದು, ಪಾಸ್ ಇಲ್ಲದವರಿಗೂ ವೀಕ್ಷಿಸಲು ಅವಕಾಶವಿರುವ ಪ್ರತ್ಯೇಕ ವಲಯ ನಿರ್ಮಿಸಲಾಗುತ್ತಿದೆ. ಈ ವಲಯದಲ್ಲಿ ಸುಮಾರು 5 ಸಾವಿರ ಮಂದಿ ಕಂಬಳ ವೀಕ್ಷಿಸಲು ಅನುಕೂಲವಾಗಲಿದೆ. ಗಣ್ಯರು, ವಿಐಪಿ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತದೆ.
25 ಲಕ್ಷ ಮಂದಿ ವೀಕ್ಷಿಸುವ ನಿರೀಕ್ಷೆ..
ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ವೀಕ್ಷಿಸಲು ಸುಮಾರು 25 ಲಕ್ಷ ಮಂದಿ ಆಗಮಿಸಬೇಕು ಎಂಬುದು ಆಯೋಜಕರ ಆಶಯವಾಗಿದೆ. ಕಂಬಳದ ಬಗ್ಗೆ ಮೈಸೂರಿನಲ್ಲಿ ಈಗಾಗಲೇ ಹೆಚ್ಚಿನ ಕುತೂಹಲ ಮೂಡಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರು ಕಂಬಳ ಯಾವಾಗ ನಡೆಯಲಿದೆ ಎಂದು ವಿಚಾರಿಸುತ್ತಿದ್ದಾರೆ. ಸುಮಾರು ಐದು ಎಕರೆ ಪ್ರದೇಶದಲ್ಲಿ ಕೋಣಗಳನ್ನು ಇರಿಸುವ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸಿ ಕೋಣಗಳೊಂದಿಗೆ ಛಾಯಾಚಿತ್ರ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶವೂ ಇದೆ. ಈ ಮೂಲಕ ಕರಾವಳಿಯ ಕಂಬಳ ಕ್ರೀಡೆ, ಸಂಸ್ಕೃತಿ ಮತ್ತು ಆಹಾರ ವೈವಿಧ್ಯವನ್ನು ಮೈಸೂರು ದಸರಾ ಮೂಲಕ ರಾಜ್ಯದ ಜನರಿಗೆ ಪರಿಚಯಿಸುವ ಪ್ರಯತ್ನ ನಡೆಯಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.
ತುಳುನಾಡು-ಕರುನಾಡಿಗೆ ಸಂಬಂಧ ಕಲ್ಪಿಸುವ ಕೊಂಡಿ:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೈಸೂರು ದಸರಾದಲ್ಲಿ ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳಕ್ಕೆ ಅವಕಾಶ ನೀಡಿದ್ದು, ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇವೆ. ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳು ಬಾಷೆಗೆ ವಿಶೇಷ ಸ್ಥಾನ ಮಾನ ದೊರಕಿದ್ದು, ಇದೀಗ ತುಳುನಾಡು ಕರುನಾಡಿಗೆ ಸಂಬಂಧ ಕಲ್ಪಿಸುವ ಕೊಂಡಿಯಾಗಿ ಕಂಬಳ ನಡೆಯಲಿದೆ ಎಂದು ಕಂಬಳ ಅಸೋಸಿಯೇಶನ್‌ನ ರಾಜ್ಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ಕಂಬಳ ಅಕಾಡೆಮಿಯ ಸಂಸ್ಥಾಪಕ ಗುಣಪಾಲ ಕಡಂಬ ಮೊದಲಾದವರು ಉಪಸ್ಥಿತರಿದ್ದರು.