ಕರಾವಳಿಯ ಜನಸಮುದಾಯಗಳ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಿ, ಸೆಪ್ಟಂಬರ್ 18 ರ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ ನಿರ್ಧಾರ

ಕರಾವಳಿಯ ಜನಸಮುದಾಯಗಳ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಿ, ಸೆಪ್ಟಂಬರ್ 18 ರ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ ನಿರ್ಧಾರ

ಮಂಗಳೂರು: ಮಂಗಳೂರಿನಲ್ಲಿ ನವಂಬರ್ 18 ರಂದು ರಾಜ್ಯ ಸರಕಾರ ನಡೆಸಲುದ್ದೇಶಿಸಿರುವ ಸಚಿವ ಸಂಪುಟ ಸಭೆ ಪ್ರವಾಸೋದ್ಯಮ, ಬಂಡವಾಳ ಹೂಡಿಕೆಗಳಿಗೆ ಸಂಬಂಧಿಸಿ ಕಾರ್ಪೊರೇಟ್ ಬಂಡವಾಳದ ಹಿತಾಸಕ್ತಿಗಳನ್ನು ಎತ್ತಿಹಿಡಿಯುವ, ಜನರ ಗಮನ ಸೆಳೆಯುವ ಇವೆಂಟ್ ಆಗಿ ಮುಗಿದು ಹೋಗುವ ಸಾಧ್ಯತೆಗಳು ನಿಚ್ಚಳವಾಗುತ್ತಿದೆ. ಇದರ ಬದಲಾಗಿ ಕರಾವಳಿ ಕರ್ನಾಟಕದ ಜನ ಸಮುದಾಯಗಳ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವುದು, ಜನಕೇಂದ್ರಿತವಾದ ಸಮಗ್ರ ಅಭಿವೃದ್ದಿ ಯೋಜನೆಗಳನ್ನು ರೂಪಿಸುವುದು ಸಚಿವ ಸಂಪುಟದ ಹಾಗು ರಾಜ್ಯ ಸರಕಾರದ ಆದ್ಯತೆ ಆಗಬೇಕು ಎಂದು ಸಿಪಿಐಎಂ ಆಗ್ರಹಿಸುತ್ತದೆ. ಈ ಬೇಡಿಕೆಗಳನ್ನು ಮುಂದಿಟ್ಟು ಸಚಿವ ಸಂಪುಟ ಸಭೆಗೆ ಮೆರವಣಿಗೆ ನಡೆಸಲು, ಆಗ್ರಹ  ಪತ್ರ ಸಲ್ಲಿಸಲು ಸಿಪಿಎಂ ದ.ಕ. ಜಿಲ್ಲಾ ಸಮಿತಿ ತೀರ್ಮಾನಿಸಿದೆ.

ಜನತೆ ಬಹಳ ನಿರೀಕ್ಷೆ ಇಟ್ಟುಕೊಂಡಿರುವ ಕರಾವಳಿ ಕರ್ನಾಟಕಕ್ಕೆ ಸಂಬಂಧಿಸಿದ ಪ್ರವಾಸೋದ್ಯಮ ನೀತಿ "ಪಿ ಪಿ ಪಿ" ಮಾದರಿಯಲ್ಲಿ ಕಾರ್ಪೊರೇಟ್ ಕಂಪೆನಿಗಳು ಹಾಗು ಉದ್ಯಮಿಗಳ ಅನುಕೂಲಕ್ಕೆ ತಕ್ಕುದಾಗಿ ರೂಪಿಸುತ್ತಿರುವುದು ಬಹಿರಂಗಗೊಳ್ಳುತ್ತಿದೆ. ಸ್ಥಳೀಯ ಜನರನ್ನು, ವಿದ್ಯಾವಂತ ಯುವಜನರನ್ನು  ಪ್ರವಾಸೋದ್ಯಮದಲ್ಲಿ ಪಾಲುದಾರರನ್ನಾಗಿಸುವ ಯಾವ ಅಂಶಗಳೂ ಪ್ರಸ್ತಾವಿತ ನೀತಿಯಲ್ಲಿ ಕಂಡು ಬರುತ್ತಿಲ್ಲ. 

ಹಾಗೆಯೆ, ಜಿಲ್ಲೆಯಲ್ಲಿ ಈಗಾಗಲೆ ನೆಲೆಯೂರಿರುವ, ಹೊಸದಾಗಿ ಹೂಡಿಕೆಗೆ ಯತ್ನಿಸುತ್ತಿರುವ ಉದ್ಯಮಗಳ ಉದ್ಯೋಗವಕಾಶಗಳಲ್ಲಿ ಸ್ಥಳೀಯ ಯುವಜನತೆಗೆ ಆದ್ಯತೆ ನೀಡುವುದು, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆ, ನಿಮ್ಹಾನ್ಸ್ ನರರೋಗದ ಆಸ್ಪತ್ರೆಯ ಘಟಕಗಳನ್ನು ಮಂಗಳೂರಿನಲ್ಲಿ ಸ್ಥಾಪಿಸುವುದು, ಕರಾವಳಿ ಜಿಲ್ಲೆಗಳ ನೂತನ ತಾಲೂಕುಗಳಿಗೆ ತಾಲೂಕು ಆಸ್ಪತ್ರೆಗಳನ್ನು ಮಂಜೂರುಗೊಳಿಸುವುದು, ಕರಾವಳಿ ಜಿಲ್ಲೆಗಳಿಗೆ ನೂತನ ಮರಳು ನೀತಿ ರೂಪಿಸುವುದು, ಕೆಂಪು ಕಲ್ಲು, ಮರಳು ದರ ನಿಗದಿಗೆ ನಿರ್ದಿಷ್ಟ ಕ್ರಮ ನಿಗದಿಪಡಿಸುವುದು, ಇಲ್ಲಿನ ಖಾಸಗಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಲ್ಲಿ ವಿಪರೀತ ದರ ವಿಧಿಸುವುದಕ್ಕೆ ನಿಯಂತ್ರಣ ತರುವುದು, ಮನೆ ನಿವೇಶನ, ವಸತಿ ಯೋಜನೆ ಜಾರಿಗೆ ತರುವುದು, ಹಕ್ಕುಪತ್ರ ವಿತರಣೆ ಸಹಿತ ಭೂಮಿಗೆ ಸಂಬಂಧಿಸಿದ ಗಂಭೀರ ಸ್ವರೂಪ ತಾಳಿರುವ ಸಮಸ್ಯೆಗಳನ್ನು ಪರಿಹರಿಸುವುದು, ಹೆಚ್ಚುತ್ತಿರುವ ಟೋಲ್ ಬೂತ್ ಗಳಿಗೆ ಕಡಿವಾಣ ಹಾಕುವುದು,  ಅಂತರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳುವುದು, ಮಂಗಳೂರು ನಗರ ವ್ಯಾಪ್ತಿಯಲ್ಲಿ ಗಂಭೀರ ಸ್ವರೂಪ ತಾಳಿರುವ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ಮೇಲ್ಸೇತುವೆ, ರಿಂಗ್ ರಸ್ತೆ ಸಹಿತ ಪ್ರಾಯೋಗಿಕ ಯೋಜನೆ ರೂಪಿಸುವುದು, ಮೀನುಗಾರಿಕೆ, ಅಡಿಕೆ, ರಬ್ಬರ್ ಉತ್ಪನ್ನಗಳ ಉದ್ಯಮವನ್ನು ಸ್ಥಳೀಯವಾಗಿ ಸ್ಥಾಪಿಸುವುದು, ಕರಾವಳಿ ಜಿಲ್ಲೆಗಳಲ್ಲಿ ಸರಕಾರಿ ಇಲಾಖೆಗಳ ಖಾಲಿ ಬಿದ್ದಿರುವ ಹುದ್ದೆಗಳನ್ನು ಭರ್ತಿ ಮಾಡುವುದು, ವಿದೇಶಗಳಲ್ಲಿ, ಪ್ರಧಾನವಾಗಿ ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವವರಿಗೆ ಕಲ್ಯಾಣ ಮಂಡಳಿ ಸ್ಥಾಪಿಸುವುದು,  ಕೊರಗ ಸಮುದಾಯದ ಭೂಮಿ, ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ಸಂಬಂಧಿಸಿ ಸ್ಪಷ್ಟ ಯೋಜನೆ ರೂಪಿಸುವುದು, ಡಿ ಸಿ‌ ಮನ್ನಾ ಭೂಮಿ ಸಹಿತ ದಲಿತ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸುವುದು, ಮಲೆಕುಡಿಯರು, ಕುಡುಬಿಗಳು ಸಹಿತ ಆದಿವಾಸಿಗಳು, ಮೈಕ್ರೋ ಸಮುದಾಯಗಳ ಅಭಿವೃದ್ದಿಗೆ ಯೋಜನೆ ಹೊಂದುವುದು, ಕೋಮುವಾದ, ಮತೀಯ ಸಂಘರ್ಷವನ್ನು ಬುಡಮಟ್ಟದಿಂದಲೆ ನಿರ್ಮೂಲನೆಗೊಳಿಸುವುದು, ಅಲ್ಪಸಂಖ್ಯಾತ ಸಮುದಾಯವಾಗಿರುವ ಮುಸ್ಲಿಮರು, ಕ್ರೈಸ್ತರು ಘನತೆಯಿಂದ ಬದುಕುವ ವಾತಾವರಣ ಖಾತರಿ ಪಡಿಸುವುದು ಸೇರಿದಂತೆ ಕರಾವಳಿ ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಬೇಕು, ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿ ಜನಸಾಮಾನ್ಯರನ್ನು ಒಳಗೊಳ್ಳುವ ರೀತಿಯಲ್ಲಿ ಸಮಗ್ರ ನೀತಿಯನ್ನು ಅಂಗೀಕರಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ನವಂಬರ್ 18 ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಗೆ ಸಿಪಿಐಎಂ ವತಿಯಿಂದ ಬೃಹತ್ ಮಾರ್ಚ್ ಸಂಘಟಿಸಲಾಗುವುದು, ಮುಖ್ಯಮಂತ್ರಿ ನೇತೃತ್ವದ ಸಚಿವ ಸಂಪುಟಕ್ಕೆ ಆಗ್ರಹ ಪತ್ರ ಸಲ್ಲಿಸಲಾಗುವುದು ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article