ವಿಸ್ತಾರಗೊಳ್ಳುತ್ತಿದೆ ವೆನ್‌ಲಾಕ್ ಸರಕಾರಿ ಆಸ್ಪತ್ರೆ: 400 ಬೆಡ್‌ಗಳು ಸೇರ್ಪಡೆ
ಮೊದಲ ಹಂತದಲ್ಲಿ ಸೇರ್ಪಡೆಯಾಗಲಿರುವ 200 ಹಾಸಿಗೆಗಳಿಗೆ ಅಗತ್ಯವಿರುವ ವೈದ್ಯಕೀಯ ಉಪಕರಣಗಳು, ಪೀಠೋಪಕರಣ ಹಾಗೂ ಮೂಲಸೌಕರ್ಯಗಳನ್ನು ಈಗಾಗಲೇ ಲಭ್ಯವಿರುವ ಬಂಡವಾಳ ಅನುದಾನದೊಳಗೆ ಕಲ್ಪಿಸುವಂತೆ ಸರ್ಕಾರ ಸೂಚಿಸಿದೆ. ಖರೀದಿ ಹಾಗೂ ಕಾಮಗಾರಿಗಳನ್ನು ಕರ್ನಾಟಕ ಪಾರದರ್ಶಕ ಸಾರ್ವಜನಿಕ ಖರೀದಿ ಕಾಯ್ದೆ ಮತ್ತು ನಿಯಮಗಳ ಅನ್ವಯ ಕೈಗೊಳ್ಳಬೇಕು. ನಿಗದಿತ ಅನುದಾನದ ಮಿತಿಯಲ್ಲಿಯೇ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಹಾಗೂ ಹೆಚ್ಚುವರಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಬಾರದು ಎಂದು ಸರ್ಕಾರ ಷರತ್ತು ವಿಧಿಸಿದೆ.
ಹೆಚ್ಚುವರಿ ಹಾಸಿಗೆಗಳಿಗೆ ಅಗತ್ಯವಿರುವ ವೈದ್ಯರು, ಶುಶ್ರೂಷಕರು ಹಾಗೂ ಇತರೆ ಸಿಬ್ಬಂದಿ ನೇಮಕಾತಿಗಾಗಿ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ. ಮೊದಲ ಹಂತದ ವಿಸ್ತರಣೆಗೆ ವೈದ್ಯಕೀಯ ಮತ್ತು ಪೂರಕ ಸಿಬ್ಬಂದಿ ಸೇರಿದಂತೆ ಸುಮಾರು 195 ಸಿಬ್ಬಂದಿ, ಅದರಲ್ಲೂ 115 ಸ್ಟಾಫ್ ನರ್ಸ್‌ಗಳನ್ನು ಒದಗಿಸುವ ಯೋಜನೆ ಇದೆ. ಪ್ರಸ್ತುತ ವೆನ್ಲಾಕ್ ಆಸ್ಪತ್ರೆಯಲ್ಲಿ 1,088 ಹಾಸಿಗೆಗಳು ಕಾರ್ಯನಿರ್ವಹಿಸುತ್ತಿವೆ. ಈಗ ನಿರ್ಮಾಣ ಹಂತದಲ್ಲಿರುವ ಹಾಗೂ ಅನುಮೋದನೆಗೊಂಡಿರುವ ವಿವಿಧ ಮೂಲಸೌಕರ್ಯಗಳು ಪೂರ್ಣಗೊಂಡ ಬಳಿಕ ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯ ಮತ್ತಷ್ಟು ಹೆಚ್ಚಲಿದೆ.
ಕಾಮಗಾರಿ ಅಂತಿಮ ಹಂತದಲ್ಲಿರುವ 50 ಹಾಸಿಗೆಗಳ ಸಿಸಿಬಿ ಬ್ಲಾಕ್, ನೂತನ ಓಪಿಡಿ ಕಟ್ಟಡದ ಮೂರನೇ ಮತ್ತು ನಾಲ್ಕನೇ ಮಹಡಿಗಳಲ್ಲಿ ಕಲ್ಪಿಸಲಾಗುತ್ತಿರುವ 320 ಹಾಸಿಗೆಗಳು ಹಾಗೂ ಎಂಆರ್ಪಿಎಲ್ನ ಸಿಎಸ್‌ಆರ್ ನಿಧಿಯಿಂದ ಮೆಡಿಕಲ್ ಬ್ಲಾಕ್ನಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡದ 74 ಹಾಸಿಗೆಗಳು ಆಸ್ಪತ್ರೆಯ ಸಾಮರ್ಥ್ಯಕ್ಕೆ ಸೇರ್ಪಡೆಯಾಗಲಿವೆ. ಈ ಎಲ್ಲಾ ಯೋಜನೆಗಳು ಪೂರ್ಣಗೊಂಡ ಬಳಿಕ ವೆನ್ಲಾಕ್ ಆಸ್ಪತ್ರೆಯ ಒಟ್ಟು ಹಾಸಿಗೆ ಸಾಮರ್ಥ್ಯ 1,532ಕ್ಕೆ ತಲುಪುವ ನಿರೀಕ್ಷೆಯಿದೆ.
ಮೊದಲ ಹಂತದಲ್ಲಿ ಸೇರ್ಪಡೆಯಾಗಲಿರುವ 200 ಹಾಸಿಗೆಗಳಲ್ಲಿ 50 ಹಾಸಿಗೆಗಳನ್ನು ಐಸಿಯುಗಾಗಿ ಮೀಸಲಿಡಲು ಯೋಜಿಸಲಾಗಿದೆ. ಇದರಲ್ಲಿ 30 ವೆಂಟಿಲೇಟರ್ ಹಾಸಿಗೆಗಳು ಹಾಗೂ 20 ಸ್ಟೆಪ್-ಡೌನ್ ಹಾಸಿಗೆಗಳು ಇರಲಿವೆ. ಇದರ ಜೊತೆಗೆ 10 ಹಾಸಿಗೆಗಳನ್ನು ತುರ್ತು ಚಿಕಿತ್ಸೆಗೆ ಮೀಸಲಿಡಲಾಗುತ್ತದೆ. ಉಳಿದ 140 ಹಾಸಿಗೆಗಳನ್ನು ಸಾಮಾನ್ಯ ವಾರ್ಡ್ಗಳಿಗೆ ಬಳಸಲಾಗುತ್ತದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಹೆಚ್ಚುತ್ತಿರುವ ಐಸಿಯು ಹಾಗೂ ತುರ್ತು ಚಿಕಿತ್ಸೆಯ ಬೇಡಿಕೆಯನ್ನು ನಿಭಾಯಿಸುವ ಉದ್ದೇಶದಿಂದ ಈ ವಿಸ್ತರಣೆ ಕೈಗೊಳ್ಳಲಾಗುತ್ತಿದೆ.
ವೆನ್ಲಾಕ್ ಆಸ್ಪತ್ರೆ ಮಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ದಕ್ಷಿಣ ಕನ್ನಡದ ಜೊತೆಗೆ ಕರಾವಳಿ ಕರ್ನಾಟಕದ ಹಲವು ಜಿಲ್ಲೆಗಳು ಹಾಗೂ ನೆರೆಯ ಕೇರಳದ ಪ್ರದೇಶಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ಆಗಮಿಸುತ್ತಾರೆ. ವಿಶೇಷವಾಗಿ ತುರ್ತು ಚಿಕಿತ್ಸೆ, ಐಸಿಯು ಹಾಗೂ ವಿವಿಧ ವಿಶೇಷ ಚಿಕಿತ್ಸಾ ವಿಭಾಗಗಳಿಗೆ ಆಸ್ಪತ್ರೆಯ ಮೇಲಿನ ಅವಲಂಬನೆ ಹೆಚ್ಚಿರುವ ಹಿನ್ನೆಲೆಯಲ್ಲಿ ಹಾಸಿಗೆ, ಸಿಬ್ಬಂದಿ ಹಾಗೂ ಚಿಕಿತ್ಸಾ ಸೌಲಭ್ಯಗಳ ವಿಸ್ತರಣೆಗೆ ಸರ್ಕಾರ ಒತ್ತು ನೀಡಿದೆ.
ಒಟ್ಟಾರೆ 400 ಹೆಚ್ಚುವರಿ ಹಾಸಿಗೆಗಳ ವಿಸ್ತರಣೆಯಲ್ಲಿ ಮೊದಲ ಹಂತವಾಗಿ 200 ಹಾಸಿಗೆಗಳಿಗೆ ಅನುಮೋದನೆ ದೊರೆತಿದ್ದು, ಮುಂದಿನ ಹಂತದಲ್ಲಿ ಇನ್ನೂ 200 ಹಾಸಿಗೆಗಳನ್ನು ಸೇರ್ಪಡೆಗೊಳಿಸುವ ಉದ್ದೇಶವಿದೆ. ಈಗಾಗಲೇ ನಿರ್ಮಾಣ ಹಂತದಲ್ಲಿರುವ ವಿವಿಧ ಕಟ್ಟಡಗಳು ಹಾಗೂ ಹೊಸ ಹಾಸಿಗೆಗಳ ಸೇರ್ಪಡೆಯೊಂದಿಗೆ ವೆನ್ಲಾಕ್ ಆಸ್ಪತ್ರೆ ಕರಾವಳಿ ಭಾಗದ ಪ್ರಮುಖ ಸರ್ಕಾರಿ ಚಿಕಿತ್ಸಾ ಕೇಂದ್ರವಾಗಿ ಮತ್ತಷ್ಟು ವಿಸ್ತಾರಗೊಳ್ಳಲಿದೆ.