ಚಾರ್ಮಾಡಿ ಘಾಟ್ ರಸ್ತೆ ಅಗಲೀಕರಣ: 7,540 ಮರಗಳ ಕಡಿತಕ್ಕೆ ಪ್ರಸ್ತಾಪ

ಚಾರ್ಮಾಡಿ ಘಾಟ್ ರಸ್ತೆ ಅಗಲೀಕರಣ: 7,540 ಮರಗಳ ಕಡಿತಕ್ಕೆ ಪ್ರಸ್ತಾಪ

ಮಂಗಳೂರು: ಚಾರ್ಮಾಡಿ ಘಾಟ್ ಭಾಗದ ಎನ್‌ಎಚ್-73ರ ಅಗಲೀಕರಣಕ್ಕೆ ಸಂಬಂಧಿಸಿ ಸುಮಾರು 39 ಎಕರೆ ಮೀಸಲು ಅರಣ್ಯ ಭೂಮಿಯ ಕನಿಷ್ಟ 7,540 ಮರಗಳನ್ನು ಕಡಿಯಲು ಉದ್ದೇಶಿಸಲಾಗಿದೆ. ಮರ ಕಡಿಯುವ ಮೊದಲು ಸಾರ್ವಜನಿಕ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿ ಮಂಗಳೂರಿನ ಪರಿಸರಾಸಕ್ತ ವಿವೇಕ್ ಎಂ. ಅವರು ಕೇಂದ್ರ ಹಾಗೂ ರಾಜ್ಯದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ತಮ್ಮ ಮನವಿ ಪತ್ರದಲ್ಲಿ ಯೋಜನೆಯ ಕುರಿತಂತೆ ವಿವರ ನೀಡಿರುವ ವಿವೇಕ್‌ರವರು, ಕರ್ನಾಟಕದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆಯ ಮುಖ್ಯಸ್ಥರು ಸೆ.10ರಂದು ತಾತ್ವಿಕ ಹಂತ 1 ಅನುಮದೋನೆಗೆ ಶಿಫಾರಸು ಮಾಡಿರುವುದಾಗಿ ತಿಳಿಸಿದ್ದಾರೆ. 

ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸ್ಥಳ ಪರಿಶೀಲನಾ ವರದಿಯಲ್ಲಿ ಪ್ರಸ್ತಾವಿತ ರಸ್ತೆ ಹುಲಿ ಕಾರಿಡಾರ್ ಮೂಲಕ ಸಾಗುತ್ತದೆ. ಈ ಪ್ರದೇಶದಲ್ಲಿ ಕಾಡಾನೆಗೆ ನಿಯಮಿತ ಸಂಚಾರವಿದೆ ಮತ್ತು ಅವುಗಳ ಮುಕ್ತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ದಾಖಲಿಸಲಾಗಿದೆ. ಆದರೆ ಸಲ್ಲಿಸಲಾದ ಮನವಿಯ ಪ್ರಕಾರ ಈ ಹಂತದವರೆಗೆ ವನ್ಯಜೀವಿ ಅನುಮತಿ ಪ್ರಕ್ರಿಯೆ ಆರಂಭವಾಗಿಲ್ಲ ಮತ್ತು ವನ್ಯಜೀವಿಗಳ ಮೇಲಿನ ಪರಿಣಾಮ ತಗ್ಗಿಸುವ ವಿವರವಾದ ಯೋಜನೆಯೂ ಸಲ್ಲಿಕೆಯಾಗಿಲ್ಲ. 

ಪ್ರಸ್ತಾವಿತ ರಸ್ತೆ ಚಾರ್ಮಾಡಿ- ಕನಪಾಡಿ ಮೀಸಲು ಅರಣ್ಯ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಗುರುತಿಸಿರುವ ಕುದುರೆಮುಖ- ಪುಷ್ಪಗಿರಿ ಹುಲಿ ಕಾರಿಡಾರ್‌ನ ಸಂಪರ್ಕ ಪ್ರದೇಶದ ಮೂಲಕ ಸಾಗುತ್ತದೆ. ಈ ಪ್ರದೇಶವು ನೈಸರ್ಗಿಕವಾಗಿ ಬೆಳೆದ ಉಷ್ಣವಲಯದ ಮಳೆಕಾಡು, ಆಳವಾದ ಕಣಿವೆಗಳು ಹಾಗೂ ಹೊಳೆಗಳನ್ನು ಒಳಗೊಂಡಿದೆ. ಅರಣ್ಯ ವರ್ಗಾವಣೆ ಪ್ರಸ್ತಾವನೆ ಚಾರ್ಮಾಡಿ ಗ್ರಾಮದ ದಕ್ಷಿಣ ಕನ್ನಡ ಭಾಗದಿಂದ ಚಿಕ್ಕಮಗಳೂರು ಜಿಲ್ಲೆಯ ಗಡಿಯವರೆಗೆ ಕೇವಲ 11.2 ಕಿ.ಮೀ. ವ್ಯಾಪ್ತಿಯದ್ದಾಗಿದೆ. 

ಮೂಡಿಗೆರೆ ಕಡೆಗೆ ಮುಂದಿನ ರಸ್ತೆ ಅಗಲೀಕರಣ ಕಾಮಗಾರಿಗಳನ್ನು ಪ್ರತ್ಯೇಕ ಪ್ಯಾಕೇಜ್ಗಳಾಗಿ ಕೈಗೊಳ್ಳುವ ಸಂದರ್ಭ ಹೆಚ್ಚುವರಿ ಅರಣ್ಯ ಬಳಕೆ ಮತ್ತು ಮರಗಳ ಕಡಿತವಾಗುವ ಸಾಧ್ಯತೆ ಇದೆ. ಇದರಿಂದ ಕಾರಿಡಾರ್ ಕ್ಷಿಟ್ಟದ ಯೋಜನೆಯಾಗಿ ಕೈಗೊಳ್ಳುವ ಬದಲು ಯೋಜನಾ ಪ್ರವರ್ತಕರು ರಸ್ತೆ ಅಗಲೀಕರಣವನ್ನು ಹಂತ ಹಂತವಾಗಿ ಪ್ರತ್ಯೇಕ ಪ್ಯಾಕೇಜ್‌ಗಳ ಮೂಲಕ ಮುಂದುವರಿಸುವ ಸಾಧ್ಯತೆ ಇದ್ದು ಇದು ಕಳವಳಕಾರಿಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article