ಸುಲಿಗೆ, ವಂಚನೆ: ನಕಲಿ ಎನ್‌ಸಿಐಬಿ ಅಧಿಕಾರಿ ಕುಖ್ಯಾತ ಸ್ಯಾಮ್ ಪೀಟರ್ ಪೊಲೀಸ್ ಬಲೆಗೆ
ಜಾಮೀನು ಪಡೆದು ಕಳೆದ 3 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನನ್ನು ಸಿಸಿಬಿ ಪೊಲೀಸರು ಜಾಲ ಬೀಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲತಃ ಕೇರಳ ರಾಜ್ಯದ ಆಲಪ್ಪುಯ ಕೊಲ್ಲಂ ನಿವಾಸಿಯಾಗಿರುವ ಈತ, ಪ್ರಸ್ತುತ ಉತ್ತರ ಪ್ರದೇಶದ ಲಖನೌದಲ್ಲಿ ವಾಸವಾಗಿದ್ದ.
ಹಿನ್ನೆಲೆ..
ಆರೋಪಿ ಸ್ಯಾಮ್ ಪೀಟರ್ ತನ್ನದೇ ಆದ ಗ್ಯಾಂಗ್ ರಚಿಸಿಕೊಂಡು, ರಾಷ್ಟ್ರೀಯ ತನಿಖಾ ಸಂಸ್ಥೆಗಳ ಅಧಿಕಾರಿಗಳಂತೆ ನಟಿಸುತ್ತಿದ್ದ. ಹಣಕಾಸು ವಿವಾದಗಳು, ಬ್ಯಾಂಕ್ ವಂಚನೆಗಳು ಹಾಗೂ ತೆರಿಗೆ ವಂಚನೆ ಪ್ರಕರಣಗಳಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು, ತಾನು ಅಧಿಕಾರ ಹೊಂದಿರುವ ಉನ್ನತಾಧಿಕಾರಿ ಎಂದು ನಂಬಿಸಿ ಹಣ ವಸೂಲಿ ಮಾಡುತ್ತಿದ್ದ. ಈ ಸಂಬಂಧ ಮಂಗಳೂರಿನ ಕದ್ರಿ ಠಾಣೆ ಪೊಲೀಸರು 2019ರ ಆಗಸ್ಟ್ 16 ರಂದು ಪಂಪ್‌ವೆಲ್‌ನ ಲಾಡ್ಜ್ ಒಂದರ ಮೇಲೆ ದಾಳಿ ನಡೆಸಿ, ಸ್ಯಾಮ್ ಪೀಟರ್ ಸೇರಿದಂತೆ 8 ಮಂದಿ ಗ್ಯಾಂಗ್ ಸದಸ್ಯರನ್ನು ಬಂಧಿಸಿದ್ದರು. ತದನಂತರ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದ ಆರೋಪಿಯು ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.
ತನ್ನ ನಿಜವಾದ ಗುರುತನ್ನು ಮರೆಮಾಚಲು ಈತ ಸ್ಥಳದಿಂದ ಸ್ಥಳಕ್ಕೆ ಹೆಸರುಗಳನ್ನು ಬದಲಾಯಿಸುತ್ತಿದ್ದ. ತನಿಖೆಯ ವೇಳೆ ಈತ , ಆಂಟನಿ, ರಾಹುಲ್ ಪೀಟರ್,ಸ್ಯಾಮ್ ಪೀಟರ್, ರಾಜೇಶ್ ರಾಬಿನ್ಸನ್, ರೀತು ರಿಚರ್ಡ್, ರಾಯ್ ಜೇಕಬ್,ರಾಬಿನ್ ರಿಚರ್ಡ್ಸನ್,ರಾಬಿನ್ ಸನ್, ಆಂಟೋನಿ ಪ್ರಾನ್ಸಿಸ್, ಶಾರೂನ್ ಪ್ರಾನ್ಸಿಸ್ ,ಡ್ಯಾನಿ ತಾರಕನ್,ಸೇರಿದಂತೆ ವಿವಿಧ ನಕಲಿ ಹೆಸರುಗಳನ್ನು ಬಳಸಿಕೊಂಡು ವಂಚನೆ ಎಸಗುತ್ತಿದ್ದುದು ಬೆಳಕಿಗೆ ಬಂದಿದೆ.
ರೆಡ್ ಕಾರ್ನರ್ ನೋಟಿಸ್, 17 ಪ್ರಕರಣ..
ಆರೋಪಿ ಸ್ಯಾಮ್ ಪೀಟರ್ ಒಬ್ಬ ಕುಖ್ಯಾತ ವಂಚಕನಾಗಿದ್ದು, ‘ರಾಹುಲ್ ಪೀಟರ್’ ಎಂಬ ಅಲಿಯಾಸ್ ಹೆಸರಿನಲ್ಲಿ ಆತನ ವಿರುದ್ಧ 2001ರಿಂದ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿತ್ತು. ಈತನ ವಿರುದ್ಧ ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣೆ, ಉಳ್ಳಾಲ, ಕೊಣಾಜೆ, ಚಿಕ್ಕಬಳ್ಳಾಪುರ, ಬೆಂಗಳೂರು, ಉಡುಪಿ ಹಾಗೂ ಕುಶಾಲನಗರ ಸೇರಿದಂತೆ ಕರ್ನಾಟಕದ ಹಲವೆಡೆ ಮತ್ತು ಬಿಹಾರ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್ಗಢ, ಜಾರ್ಖಂಡ್ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ವಂಚನೆ, ಸುಲಿಗೆಯ ಸುಮಾರು 17 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಮಂಗಳೂರು ಉಳ್ಳಾಲ ಠಾಣೆ ಪ್ರಕರಣದಲ್ಲಿ 17 ಬಾರಿ ವಾರೆಂಟ್ ಹಾಗೂ ಮಂಗಳೂರು ಪೂರ್ವ ಠಾಣೆ ಪ್ರಕರಣದಲ್ಲಿ 14 ಬಾರಿ ವಾರೆಂಟ್ ಜಾರಿಯಾಗಿ ಪ್ರೊಕ್ಲೊಮೇಷನ್ (ಉದ್ಘೋಷಣೆ) ಹೊರಡಿಸಲಾಗಿತ್ತು. ಬಂಧಿತ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.