ಪಾಂಡೇಶ್ವರ ಶ್ರೀನಿವಾಸ್ ಕಾಲೇಜಿನಲ್ಲಿ ರ್ಯಾಗಿಂಗ್-ಕ್ರಮ ಕೈಗೊಳ್ಳಲು ಒತ್ತಾಯ: ಡಿವೈಎಫ್ಐ

ಪಾಂಡೇಶ್ವರ ಶ್ರೀನಿವಾಸ್ ಕಾಲೇಜಿನಲ್ಲಿ ರ್ಯಾಗಿಂಗ್-ಕ್ರಮ ಕೈಗೊಳ್ಳಲು ಒತ್ತಾಯ: ಡಿವೈಎಫ್ಐ

ಮಂಗಳೂರು: ಮಂಗಳೂರಿನ ಪಾಂಡೇಶ್ವರದ ಶ್ರೀನಿವಾಸ್ ಕಾಲೇಜಿನಲ್ಲಿ ರೇಗಿಂಗ್ ಪ್ರಕರಣಗಳು ನಿರಂತರವಾಗಿ ಬೆಳಕಿಗೆ ಬರುತ್ತಿದ್ದು ಶ್ರೀನಿವಾಸ್ ಕಾಲೇಜು ಆಡಳಿತ ಮಂಡಳಿಯು ಇದನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿ ಆರೋಪಿಸಿದೆ.

ಈ ಕುರಿತಂತೆ ಸೆ.19 ರಂದು ನಡೆದ ಗಂಭೀರ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಕಠಿಣ ಸೆಕ್ಷನ್ ಅಡಿ ಕೇಸು ದಾಖಲಾಗಿರುತ್ತದೆ. ಶ್ರೀನಿವಾಸ್ ಕಾಲೇಜಿನ ಅಮೀರ್ ಆಲಿ ಮತ್ತು ಅಲ್ಪಾಜ್ ಎಂಬ ಹೆಸರಿನ ವಿಧ್ಯಾರ್ಥಿಗಳನ್ನು ಅದೇ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಅಪಹರಿಸಿ ಖಾಸಗೀ ಕೊಠಡಿಯಲ್ಲಿ ಅಕ್ರಮವಾಗಿ ಬಂಧಿಸಿ ಅರೆಬೆತ್ತಲೆಗೊಳಿಸಿ ಬೆಲ್ಟ್ ಹ್ಯಾಂಗರ್ ಗಳಿಂದ ದಾಳಿ ನಡೆಸಿದ್ದು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ  ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ಪ್ರಥಮ ವರ್ಥಮಾನ ವರದಿಯಲ್ಲಿ ದಾಖಲಿಸಿರುತ್ತಾರೆ.

ಇಂತಹ ಅನೇಕ ಪ್ರಚಲಿತಕ್ಕೆ ಬಾರದ ಪ್ರಕರಣಗಳು ಈ ಶ್ರೀನಿವಾಸ್ ಕಾಲೇಜಿನಲ್ಲಿ ಇದ್ದರೂ ಕಾಲೇಜು ಆಡಳಿತ ಮಂಡಳಿ ಈ ಕುರಿತು ಗಂಭೀರ ಗಮನ ಹರಿಸಿದಂತೆ ತೊರುತ್ತಿಲ್ಲ. ಕಾಲೇಜು ಆಡಳಿತ ಮಂಡಳಿಯು ರ್ಯಾಗಿಂಗ್  ಕುರಿತಾಗಿ ಆಂತರಿಕವಾಗಿ ವ್ಯವಹರಿಸದೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ರ್ಯಾಗಿಂಗ್‌ಗನ್ನು ತಡೆಗಟ್ಟುವ ಯೂಜಿಸಿ ನಿಯಮಾವಳಿ 2009.” ಅನ್ವಯ ಕ್ರಮ ಕೈಗೊಳ್ಳಬೇಕು ಇದರಂತೆ ವಿದ್ಯಾರ್ಥಿ ಮತ್ತು ಪೋಷಕರಿಂದ ಬಂದ ರ್ಯಾಗಿಂಗ್ ದೂರುಗಳನ್ನು ಅಧಿಕೃತವಾಗಿ ದಾಖಲಿಸಬೇಕು. ಕೃತ್ಯವು ಅಕ್ರಮ ಬಂಧನ, ಹಲ್ಲೆ, ಆತ್ಮಹತ್ಯೆಗೆ ಪ್ರಚೋದಿಸುವಂತಹ ಗಂಭೀರ ಸ್ವರೂಪದ ಕೃತ್ಯವಾಗಿದ್ದರೆ ಆಡಳಿತ ಮಂಡಳಿಯೇ ಕುದ್ದು ಪೊಲೀಸ್ ದೂರು ದಾಖಲಿಸಬೇಕು. ಆದರೆ ಶ್ರೀನಿವಾಸ್ ಕಾಲೇಜು ಆಡಳಿತ ಮಂಡಳಿಯು ಇವ್ಯಾವುದಕ್ಕೂ ಗಮನ ಹರಿಸದೆ ಮೌನವಹಿಸಿ ಇಂತಹ ಸರಣಿ ಕೃತ್ಯಗಳಿಗೆ ಪ್ರಚೋದಿಸಿದೆ ಎಂದು ಡಿವೈಎಫ್ಐ ಗಂಭೀರವಾಗಿ ಆರೋಪಿಸಿದೆ.

ಮಂಗಳೂರಿನ ಶ್ರೀನಿವಾಸ್ ಕಾಲೇಜು ಉಚಿತ ಶಿಕ್ಷಣವನ್ನೇನು ನೀಡುತ್ತಿಲ್ಲ ಬದಲಾಗಿ ಲಕ್ಷ ಲಕ್ಷ  ಶುಲ್ಕ ಪಡೆದು ಕೊಳ್ಳುತ್ತಿವೆ. ಇಂತಹ ಕಾಲೇಜುಗಳು ವಿದ್ಯಾರ್ಥಿಗಳ ನಡತೆಯ ಕುರಿತು ಹೆಚ್ಚಿನ ಕಾಳಜಿವಹಿಸಬೇಕು ಆದರೆ ವಿದ್ಯಾರ್ಥಿಗಳ ಬದುಕಿನ ಕುರಿತು ಕಾಳಜಿವಹಿಸದೆ ಈ ರೀತಿಯಲ್ಲಿ ಶಿಕ್ಷಣದ ದಂಧೆಯಲ್ಲಿ ತೊಡಗಿರುವುದು ಖಂಡನೀಯ ಈ ಕುರಿತು ಜಿಲ್ಲೆಯ ಕಾನೂನು ಸುವ್ಯವಸ್ಥೆಯು ಕೂಡ ಗಂಭೀರ ಗಮನಹರಿಸಬೇಕೆಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಡಿವೈಎಫ್ಐ ದ. ಕ ಜಿಲ್ಲಾ ಸಮಿತಿಯು ಒತ್ತಾಯಿಸುತ್ತದೆ ಎಂದು ಡಿವೈಎಫ್ಐ ಜಿಲ್ಲಾ ಸಮಿತಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article