ರಾ.ಹೆ. ಕಾಮಗಾರಿಯಿಂದ ಕೆಟ್ಟಿರುವ ಪಿಡಬ್ಲ್ಯೂಡಿ ರಸ್ತೆಗಳು: ಪುತ್ತಿಗೆ ಗ್ರಾಮಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು
ಮರಳು ಮತ್ತು ಕಲ್ಲಿಗೆ ಏಕ ರೂಪದ ದರ ನಿಗದಿ ಪಡಿಸಿ:
ಗ್ರಾಮಸ್ಥರಾದ ಯಾದವ ಶೆಟ್ಟಿ ಮಾತನಾಡಿ ಹಲವಾರು ವರ್ಷದಿಂದ ಮರಳು ಹಾಗೂ ಕಲ್ಲಿನ ಅಭಾವವಿದೆ. ಕಲ್ಲು ಹಾಗೂ ಮರಳು ದರ 3 ಪಟ್ಟು ಹೆಚ್ಚಾಗಿದೆ.
ಜಿಲ್ಲಾಧಿಕಾರಿಗಳು ಮರಳು ಹಾಗೂ ಕಲ್ಲಿಗೆ ಏಕರೂಪದ ದರ ನಿಗದಿ ಮಾಡಬೇಕೆಂದು ಆಗ್ರಹಿಸಿ ಪಂಚಾಯತ್ ನಿಂದ ಮನವಿ ಸಲ್ಲಿಸುವಂತೆ ತಿಳಿಸಿದರು.
ಪುತ್ತಿಗೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಲೋಡುಗಟ್ಟಲೆ ಬಾಕ್ಸೈಟ್ ರವಾನೆಯಾಗುತ್ತಿದೆ. ಇದನ್ನು ನಡೆಸುವವರು ಯಾರೂ ಇದು ಎಲ್ಲಿಗೆ ಹೋಗುತ್ತಿದೆ ಎಂಬವುದನ್ನು ಗ್ರಾಮಸ್ಥರಿಗೆ ತಿಳಿಯಪಡಿಸಬೇಕೆಂದೂ ಯಾದವ ಶೆಟ್ಟಿ ಆಗ್ರಹಿಸಿದರು.
ಸ್ಥಳೀಯವಾಗಿ ಗಣಿಗಾರಿಕೆ ಮಾಡುವಾಗ ಸ್ಥಳೀಯ ಪಂಚಾಯತ್ ಅನುಮತಿ ನೀಡಬೇಕು ಎಂಬ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಅಕ್ರಮ ಕಲ್ಲುಗಣಿಗಾರಿಕೆಯಿಂದ ಪುತ್ತಿಗೆ ಗ್ರಾಮಕ್ಕೆ ಮುಂದೆ ನೇಪಾಳದಂತಹ ಸ್ಥಿತಿ ಎದುರಾಗಬಹುದು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿದರು.
ಪುತ್ತಿಗೆ ಪಂಚಾಯತ್ ವ್ಯಾಪ್ತಿಯಲ್ಲಿ ಅಧಿಕೃತ ಕೋರೆಗಳೆಷ್ಟು.?
ಪುತ್ತಿಗೆ ಪಂಚಾಯತ್ ವ್ಯಾಪ್ತಿಯಲ್ಲಿ ಎಷ್ಟು ಅಧಿಕೃತ ಮತ್ತು ಎಷ್ಟು ಅನಧಿಕೃತ ಕೋರೆಗಳು ಇವೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ, ಕೆಲವರು 20 - 50 ಸೆಂಟ್ಸ್ ಜಾಗದಲ್ಲಿ ಕೋರೆ ನಡೆಸಲು ಲೀಸ್ ಗೆ ಅನುಮತಿ ಪಡೆದುಕೊಂಡು 1-2 ಎಕ್ರೆ ಜಾಗಕ್ಕೆ ವಿಸ್ತರಿಸಿಕೊಂಡು ಕೋರೆ ನಡೆಸುತ್ತಿರುವುದರ ಬಗ್ಗೆ ಏನು ಕ್ರಮ ಕೈಗೊಳ್ಳುವಿರೆಂದು ಗಣಿ ಇಲಾಖೆಯ ಅಧಿಕಾರಿಗೆ ರಾಜೇಶ್ ಕಡಲಕೆರೆ ಪ್ರಶ್ನಿಸಿದರು.
ಪುತ್ತಿಗೆ ಪಂಚಾಯತ್ ವ್ಯಾಪ್ತಿಯಲ್ಲಿ 9 ಕಲ್ಲಿನ ಕೋರೆ ಮತ್ತು 3 ಬಾಕ್ಸೖಟ್ ಲಿಟ್ರೇಸ್ ಗ್ರೇ ಅಧಿಕೃತವಾಗಿ ನಡೆಯುತ್ತಿದೆ.ಜಾಗ ಅತಿಕ್ರಮಣ ಮಾಡಿಕೊಂಡು ಕೋರೆ ನಡೆಯುತ್ತಿದ್ದರೆ ಸ್ಥಳ ತನಿಖೆ ನಡೆಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ದಾರಿದೀಪದ ಸಮಸ್ಯೆ:
ದಾರಿ ದೀಪಗಳು 1.5 ವರ್ಷವಾದರೂ ದುರಸ್ತಿ ಕಂಡಿಲ್ಲ. ಆದರೆ ಅದಕ್ಕೆ ಟೆಂಡರ್ ಹೇಗೆ ಮೀಸಲಿಡಲಾಗಿದೆ ಎಂದು ಗ್ರಾಮಸ್ಥರೊಬ್ವರು ಪ್ರಶ್ನಿಸಿದರು. ಪಂಚಾಯತ್ ಪ್ಯಾಪ್ತಿಯಲ್ಲಿ ಕೆಲವು ಕಡೆ ನೀರಿನ ಸಮಸ್ಯೆಯಿದೆ ಎಂದು ಇನ್ನೋವ೯ ಗ್ರಾಮಸ್ಥ ಸಭೆಯ ಗಮನಕ್ಕೆ ತಂದರು.
ಸಮಸ್ಯೆ ಇದ್ದರೆ ಪಂಚಾಯತ್ ಗೆ ಲಿಖಿತ ದೂರು ನೀಡಬೇಕು ಎಂದು ಪಿಡಿಒ ಭೀಮಾ ನಾಯಕ ಬಿ. ತಿಳಿಸಿದರು.
ಮುಖ್ಯ ರಸ್ತೆಯ ಬದಿ ಜಲಜೀವನ ಮಿಷನ್ ಪೈಪ್ ಹಾಕಲಾಗಿದೆ. ಮೇಲೆ ಮಣ್ಣು ಹಾಕಿದರೂ ವಾಹನ ಸವಾರರು ಹೊಂಡಕ್ಕೆ ಬೀಳುವ ಘಟನೆಗಳು ನಡೆಯುತ್ತಿವೆ. ಮಳೆಗೆ ಮಣ್ಣು ಎದ್ದುಹೋಗುವ ಘಟನೆಗಳು ನಡೆಯುತ್ತಿವೆ ಎಂದು ಕ್ಲೇರಿ ಫೆರ್ನಾಂಡಿಸ್ ತಿಳಿಸಿದರು.
ಡಾಮಾರು ರಸ್ತೆ ಅಗೆದಿಲ್ಲ. ರಸ್ತೆಯ ಬದಿಯ ಮಣ್ಣಿನ ರಸ್ತೆಯನ್ನು ಮಾತ್ರ ಅಗೆಯಲಾಗಿದೆ. ಹೆದ್ದಾರಿಯವರು ಗ್ರಾಮ ಪಂಚಾಯತ್ ಭಾಗದಲ್ಲಿ ಕೆಲಸ ಮಾಡುವಾಗ ನಿರಾಕ್ಷೇಪಣ ಪತ್ರ ಪಡೆಯಬೇಕು ಎಂದು ಪಿಡಿಒ ತಿಳಿಸಿದರು.
ಕೈಗಾರಿಕಾ ವಲಯದ ತ್ಯಾಜ್ಯ ನೀರನ್ನು ಕಡಲಕೆರೆ ಭಾಗದ ಕೆರೆಗೆ ಬಿಡಲಾಗುತ್ತಿರುವ ಕಾರಣ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ರಾಜೇಶ್ ಕಡಲಕೆರೆ ಆರೋಪಿಸಿದರು.
ಗ್ರಾಮಸ್ಥರಾದ ವಾಸುದೇವ ನಾಯಕ್, ರೋಶನ್, ಶಶಿಧರ್ ನಾಯಕ್ ಚಚೆ೯ಯಲ್ಲಿ ಪಾಲ್ಗೊಂಡಿದ್ದರು.
ಉಪ ವಲಯಾರಣ್ಯಾಧಿಕಾರಿ ಗುರುಮೂತಿ೯, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ವೀಣಾ ಹೆಗ್ಡೆ, ಗ್ರಾಮಾಧಿಕಾರಿ ಕಿಶೋರ್ ಕುಮಾರ್ ಸಹಿತ ಪಶುಪಾಲನೆ, ಬಿಸಿಎಂ, ಶಿಕ್ಷಣ, ಮೆಸ್ಕಾಂ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದು ಇಲಾಖಾ ಮಾಹಿತಿ ನೀಡಿದರು.
ಸಿಬಂದಿಗಳಾದ ಸಂದೇಶ್ ವರದಿ ಮತ್ತು ಜಮಾ ಖಚಿ೯ನ ಪಟ್ಟಿ ವಾಚಿಸಿದರು. ಸಂಜೀವ ಅವರು ವಾಡ್೯ ಸಭೆಯ ವಿವರ ಹಾಗೂ ಯತೀಶ್ ಅವರು ಉದ್ಯೋಗ ಖಾತರಿ ಯೋಜನೆಯ ಜಮಾ ಖಚಿ೯ನ ವಿವರ ನೀಡಿದರು.
ಸೆ. 29ರಂದು ರಾ. ಹೆ. ಇಲಾಖೆಯ ಪ್ರಾಜೆಕ್ಟ್ ಡೈರೆಕ್ಟರಿಂದ ಸ್ಥಳ ತನಿಖೆ
ಗ್ರಾಮಸ್ಥರ ಆಗ್ರಹದ ಮೇರೆಗೆ ಸಭೆಯ ನಂತರ ರಾ. ಹೆ. ಇಲಾಖೆಯ ಅಧಿಕಾರಿಗಳು ಕೆಟ್ಟಿರುವ ರಸ್ತೆಗಳನ್ನು ಪರಿಶೀಲನೆ ನಡೆಸಿ ಮೇಲಾಧಿಕಾರಿಗಳ ಗಮನಕ್ಕೆ ತಂದಾಗ, ಸೆ. 29ರಂದು ಸ್ಥಳ ತನಿಖೆ ನಡೆಸಿ ಕ್ರಮಕೈಗೊಳ್ಳುವ ಭರವಸೆಯನ್ನು ರಾ. ಹೆ. ಇಲಾಖೆಯ ಪ್ರಾಜೆಕ್ಟ್ ಡೈರೆಕ್ಟರ್ ಪಿಡಿಓಗೆ ಮಾಹಿತಿ ನೀಡಿದ್ದಾರೆ.



