ತುಳು ಭಾಷೆಗೆ ಸ್ಥಾನಮಾನ-ಕೇವಲ ಪ್ರಚಾರದ ಪಿಆರ್ ಗಿಮಿಕ್ ಆಗದಿರಲಿ: ಸಂಸದ ಬ್ರಿಜೇಶ್ ಚೌಟ ಒತ್ತಾಯ

ತುಳು ಭಾಷೆಗೆ ಸ್ಥಾನಮಾನ-ಕೇವಲ ಪ್ರಚಾರದ ಪಿಆರ್ ಗಿಮಿಕ್ ಆಗದಿರಲಿ: ಸಂಸದ ಬ್ರಿಜೇಶ್ ಚೌಟ ಒತ್ತಾಯ

ಮಂಗಳೂರು: ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಿಸಿರುವುದು ಹಾಗೂ ಕರಾವಳಿ ಭಾಗಕ್ಕೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪ್ರಕಟಿಸಿರುವುದನ್ನು ಬಿಜೆಪಿ ಮುಕ್ತಕಂಠದಿಂದ ಸ್ವಾಗತಿಸುತ್ತದೆ. ಆದರೆ ಈ ಘೋಷಣೆಗಳು ಕೇವಲ ಪ್ರಚಾರದ ಪಿಆರ್ ಗಿಮಿಕ್ ಆಗದೇ, ಕಾಲಮಿತಿಯೊಳಗೆ ಅನುಷ್ಠಾನಕ್ಕೆ ಬರಬೇಕು ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಪುಟ ಸಭೆಯ ತೀರ್ಮಾನಗಳ ಕುರಿತು ಬಿಜೆಪಿಯ ನಿಲುವನ್ನು ಸ್ಪಷ್ಟಪಡಿಸಿದರು.

ತುಳು ಭಾಷೆಗೆ 2ನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ಮುಖ್ಯಮಂತ್ರಿಗಳ ತೀರ್ಮಾನವನ್ನು ಬಿಜೆಪಿ ಹಾಗೂ ಜಿಲ್ಲೆಯ ಸಮಸ್ತ ಜನಪ್ರತಿನಿಧಿಗಳು ಅತ್ಯಂತ ಸಕಾರಾತ್ಮಕವಾಗಿ ಸ್ವಾಗತಿಸುತ್ತೇವೆ ಎಂದು ತಿಳಿಸಿದರು.

ತುಳು ಭಾಷೆಯ ಈ ಮಾನ್ಯತೆಗೆ ಕಾರಣಕರ್ತರಾದ ಹೋರಾಟಗಾರರು, ಡಾ. ಎಂ. ಮೋಹನ್ ಆಳ್ವ ನೇತೃತ್ವದ ತಜ್ಞರ ಸಮಿತಿ, ಹಿಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು, ಸಚಿವರು ಹಾಗೂ ಸಾಹಿತ್ಯ ಅಕಾಡೆಮಿಯ ಮಾಜಿ - ಹಾಲಿ ಅಧ್ಯಕ್ಷರುಗಳ ಶ್ರಮವನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತೇವೆ. ತುಳು ಭಾಷೆ ಮತ್ತು ಸಂಸ್ಕೃತಿಯ ವಿಚಾರದಲ್ಲಿ ನಾವು ಯಾವುದೇ ರಾಜಕೀಯ ಮಾಡುವುದಿಲ್ಲ ಎಂದರು.

ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ ಎಂದು ತಿಳಿದ ತಕ್ಷಣವೇ, ಜಿಲ್ಲೆಯ ಬಿಜೆಪಿ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಸಮಯ ಪಡೆದು ಖುದ್ದು ಭೇಟಿಯಾಗಿದ್ದೆವು. ಕರಾವಳಿಯ ನೈಜ ಸಮಸ್ಯೆಗಳು, ಜನರ ಬೇಡಿಕೆಗಳು ಹಾಗೂ ಮುಂದಿನ ಅಭಿವೃದ್ಧಿ ಅವಕಾಶಗಳನ್ನು ಒಳಗೊಂಡ ಸಮಗ್ರ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಚರ್ಚಿಸಲಾಗಿತ್ತು. ಅದರಲ್ಲಿನ ಹಲವು ಪ್ರಮುಖ ಬೇಡಿಕೆಗಳನ್ನು ಸಂಪುಟ ಸಭೆಯಲ್ಲಿ ಕೈಗೆತ್ತಿಕೊಂಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ಸಂಪುಟ ಸಭೆಯಲ್ಲಿ ಯೋಜನೆಗಳನ್ನು ಘೋಷಣೆ ಮಾಡುವುದು ಹಾಗೂ ಸಂಭ್ರಮಿಸುವುದು ಸಹಜ. ಆದರೆ, ಕಳೆದ ಮೂರೂವರೆ ವರ್ಷಗಳ ಅನುಭವವನ್ನು ನೋಡಿದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಯಾವುದೇ ಯೋಜನೆಗಳಿಗೆ ಸರಿಯಾಗಿ ಹಣ ಹೊಂದಾಣಿಕೆಯಾಗುತ್ತಿಲ್ಲ ಎಂದರು.

ಘೋಷಣೆಯಾಗಿರುವ ಸಾವಿರಾರು ಕೋಟಿ ರೂ.ಗಳ ಯೋಜನೆಗಳನ್ನು ಕೇವಲ ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಲು ಸಾಧ್ಯವೇ? ಇದಕ್ಕೆ ಕಾಲಮಿತಿ ಇದೆಯೇ? ಅಗತ್ಯ ಅನುದಾನವನ್ನು ಸರ್ಕಾರ ಹೇಗೆ ಹೊಂದಿಸಲಿದೆ? ಎಂಬ ಆತಂಕ ಮತ್ತು ಪ್ರಶ್ನೆಗಳು ಜನರಲ್ಲಿವೆ ಎಂದು ತಿಳಿಸಿದರು.

ಸಂಪುಟ ಸಭೆಯನ್ನು ಬೆಂಗಳೂರಿನಿಂದ ಮಂಗಳೂರಿಗೆ ಶಿಫ್ಟ್ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕಷ್ಟೇ ಇದು ಸೀಮಿತವಾಗಬಾರದು. ಜವಾಬ್ದಾರಿಯುತ ಸರ್ಕಾರ ಮತ್ತು ಮುಖ್ಯಮಂತ್ರಿಗಳು ತಾವು ಘೋಷಿಸಿದ ಯೋಜನೆಗಳಿಗೆ ಪೂರಕ ಅನುದಾನ ಒದಗಿಸಿ, ನಿಗದಿತ ಸಮಯದಲ್ಲಿ ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article