ಬೆಳ್ಳಂಬೆಳ್ಳಿಗೆ ಧಕ್ಕೆಗೆ ಭೇಟಿ ನೀಡಿದ ಮುಖ್ಯಮಂತ್ರಿ: ಮೀನುಗಾರರ ಸಮಸ್ಯೆ ಆಲಿಕೆ - ವ್ಯವಹಾರ ಸ್ಥಗಿತಕ್ಕೆ ಅಸಮಾಧಾನ

ಬೆಳ್ಳಂಬೆಳ್ಳಿಗೆ ಧಕ್ಕೆಗೆ ಭೇಟಿ ನೀಡಿದ ಮುಖ್ಯಮಂತ್ರಿ: ಮೀನುಗಾರರ ಸಮಸ್ಯೆ ಆಲಿಕೆ - ವ್ಯವಹಾರ ಸ್ಥಗಿತಕ್ಕೆ ಅಸಮಾಧಾನ


ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಬೆಳಗ್ಗೆ 6 ಗಂಟೆಗೆ ಸಚಿವ ಯು.ಟಿ. ಖಾದರ್ ಹಾಗೂ ಅಧಿಕಾರಿಗಳೊಂದಿಗೆ ನಗರದ ಮೀನುಗಾರಿಕಾ ಬಂದರು (ಧಕ್ಕೆ) ಮತ್ತು ಅಳಿವೆಬಾಗಿಲಿಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. 


ಖುದ್ದು ಬೋಟ್ ಹತ್ತಿ ಸಮುದ್ರ ಮತ್ತು ಅಳಿವೆಬಾಗಿಲಿಗೆ ತೆರಳಿದ ಅವರು, ಇತ್ತೀಚೆಗೆ ಹೂಳು ತುಂಬಿ ಬೋಟ್ ಮುಳುಗಡೆಯಾಗಿದ್ದ ದುರಂತ ಸ್ಥಳವನ್ನು ವೀಕ್ಷಿಸಿದರು. ಬಳಿಕ ಧಕ್ಕೆಯ ಜೆಟ್ಟಿ ಬಳಿ ಇಂಜಿನಿಯರ್ಗಳು ಹಾಗೂ ಬಂದರು ಇಲಾಖಾ ಅಧಿಕಾರಿಗಳು ಬಿಡಿಸಿ ತೋರಿಸಿದ ನೀಲನಕ್ಷೆಯನ್ನು (ಬ್ಲೂಪ್ರಿಂಟ್) ಕೂಲಂಕಷವಾಗಿ ಪರಿಶೀಲಿಸಿ, ಧಕ್ಕೆ ವಿಸ್ತರಣೆ ಮತ್ತು ಜೆಟ್ಟಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.


ಇದೇ ಸಂದರ್ಭದಲ್ಲಿ ಮೀನು ಮಾರುಕಟ್ಟೆಗೂ ಭೇಟಿ ನೀಡಿದ ಮುಖ್ಯಮಂತ್ರಿಗಳು, ಸ್ಥಳೀಯ ಮೀನುಗಾರರು ಹಿಡಿದು ತಂದಿದ್ದ ಬೃಹತ್ ಗಾತ್ರದ ಅಂಜಲ್ (ಸುರ್ಮೆ) ಮೀನುಗಳನ್ನು ಕೈಯಲ್ಲಿ ಹಿಡಿದು ಪರಿಶೀಲಿಸಿ, ವ್ಯಾಪಾರಸ್ಥರ ಯೋಗಕ್ಷೇಮ ವಿಚಾರಿಸಿದರು. ಆದರೆ, ತಮ್ಮ ಭೇಟಿಯ ಹಿನ್ನೆಲೆಯಲ್ಲಿ ಧಕ್ಕೆಯ ದೈನಂದಿನ ಮೀನು ಮಾರಾಟ ಮತ್ತು ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಸ್ಥಳದಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ‘ನಾನು ಇಲ್ಲಿಗೆ ಬರುವ ಸಮಯಕ್ಕೆ ಅಧಿಕಾರಿಗಳು ಅಥವಾ ಪೊಲೀಸರು ಇಡೀ ಧಕ್ಕೆಯ ಚಟುವಟಿಕೆಗಳನ್ನು ನಿಲ್ಲಿಸಿದ್ದಾರೆ. ಇದರ ಬಗ್ಗೆ ನನಗೆ ಕಿಂಚಿತ್ತೂ ಸಮಾಧಾನವಿಲ್ಲ. ನಾನು ಬಂದಿದ್ದೇ ಇಲ್ಲಿನ ವಾಸ್ತವ ವಹಿವಾಟು, ಜನರ ನೈಜ ಸಮಸ್ಯೆ ಮತ್ತು ತೊಂದರೆಗಳನ್ನು ಕಣ್ಣಾರೆ ನೋಡಲು. ನನಗೆ ಯಾವುದೇ ಸೆಕ್ಯೂರಿಟಿ ಅಗತ್ಯವಿಲ್ಲ. ವ್ಯಾಪಾರ ನಿಲ್ಲಿಸಿದ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರಿಂದ ವರದಿ ಕೇಳಿದ್ದು, ಇದರಲ್ಲಿ ನಮ್ಮ ಅಧಿಕಾರಿಗಳು ಯಾರೇ ಭಾಗಿಯಾಗಿದ್ದರೂ ಅವರನ್ನು ಇಂದೇ ಅಮಾನತು ಮಾಡುತ್ತೇವೆ. ವ್ಯಾಪಾರ-ವಹಿವಾಟು ಎಂದಿನಂತೆ ನಿರಂತರವಾಗಿ ನಡೆಯಬೇಕು" ಎಂದರು.

"ಅಳಿವೆಬಾಗಿಲಿನಲ್ಲಿ ಹೂಳೆತ್ತದೆ ಬೋಟ್ ಮುಳುಗಿರುವುದು ಸಾಕ್ಷಿಯಾಗಿ ನಮ್ಮ ಕಣ್ಣೆದುರೇ ಇದೆ. ಹೂಳೆತ್ತುವ ಮಣ್ಣನ್ನು ಸಮುದ್ರಕ್ಕೆ ಹಾಕಬೇಕೆ ಅಥವಾ ಜಾಗ ವಿಸ್ತರಣೆಗೆ ಬಳಸಬೇಕೆ ಎಂಬ ಬಗ್ಗೆ ಕೇಂದ್ರ ಸರ್ಕಾರದ ತಾಂತ್ರಿಕ ಸಮಿತಿಯ ಸಲಹೆ ಪಡೆಯಲಾಗುವುದು. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಸರ್ಕಾರವೇ ಡ್ರೆಜ್ಜರ್ ಯಂತ್ರವನ್ನು ಲೀಸ್ಗೆ ಪಡೆಯುವುದೋ ಅಥವಾ ಸ್ವಂತವಾಗಿ ಖರೀದಿಸುವುದೋ ಎಂಬುದನ್ನು ಶೀಘ್ರದಲ್ಲೇ ತೀರ್ಮಾನಿಸುತ್ತೇವೆ" ಎಂದು ತಿಳಿಸಿದರು. 

ಮೀನುಗಾರ ಮಹಿಳೆಯರಿಗೆ ಸುಸಜ್ಜಿತ ಶೌಚಾಲಯ, ಪ್ರಾಥಮಿಕ ಆರೋಗ್ಯ ತಪಾಸಣಾ ಕೇಂದ್ರ ಹಾಗೂ ಬೋಟ್ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗುವುದು. ಧಕ್ಕೆ ಸುತ್ತಮುತ್ತ ರಸ್ತೆಗಳನ್ನು ಬ್ಲಾಕ್ ಮಾಡಿ, ಅಕ್ರಮವಾಗಿ ಕಾಂಪೌಂಡ್ ಹಾಕಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗಗಳನ್ನು ಮುಲಾಜಿಲ್ಲದೆ ವಶಕ್ಕೆ ಪಡೆಯಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವಾಹನಗಳ ಸುಗಮ ಸಂಚಾರಕ್ಕೆ ಪೂರಕ ವ್ಯವಸ್ಥೆ ಮಾಡಲಾಗುವುದು" ಎಂದರು.

"ಕರಾವಳಿಯ ಮೀನುಗಾರಿಕೆಯನ್ನು ಬಲಪಡಿಸಲು ಮಂಗಳೂರಿನ ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾಲಯವಾಗಿ ಉನ್ನತೀಕರಿಸಿ, ವಿದ್ಯಾರ್ಥಿಗಳ ಪ್ರವೇಶ ಮಿತಿಯನ್ನು 200 ಸೀಟುಗಳಿಗೆ ಹೆಚ್ಚಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಪ್ರವಾಸೋದ್ಯಮ ಮತ್ತು ಬ್ಲೂ ಎಕಾನಮಿಯಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲು ಹೊಸ ನೀತಿಗಳನ್ನು ರೂಪಿಸಲಾಗಿದ್ದು, ಕರಾವಳಿಯ ಆರ್ಥಿಕ ಪ್ರಗತಿಗೆ ಸರ್ಕಾರ ಬದ್ಧವಾಗಿದೆ" ಎಂದು ಭರವಸೆ ನೀಡಿದರು.

"ಕಸ್ತೂರಿ ರಂಗನ್ ವರದಿಯಿಂದ ನಮ್ಮ ಮಲೆನಾಡು ಮತ್ತು ಕರಾವಳಿಯ ಜನರಿಗೆ ಅನ್ಯಾಯವಾಗುತ್ತಿದೆ. ಈ ಸಂಬಂಧ ಸೋಮವಾರ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನ ಕರೆದಿದ್ದು, ವಾಸ್ತವಾಂಶಗಳನ್ನು ಮುಂದಿಟ್ಟು ಜನರ ಬದುಕನ್ನು ರಕ್ಷಿಸಲು ಕಾನೂನು ಚೌಕಟ್ಟಿನಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು" ಎಂದು ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article